
ಬೆಂಗಳೂರು, ಜು.10- ಲೋಕಸಭಾ ಚುನಾವಣಾ ಪೂರ್ವ ಮೈತ್ರಿಗೆ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಸಂಸದರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮೈತ್ರಿ ಸರ್ಕಾರಕ್ಕೆ ಹೊಸ ಸಂಕಷ್ಟ ಎದುರಾಗಿದ್ದು, ಬಜೆಟ್ ಅಧಿವೇಶನದ ನಂತರ ಮಹತ್ವದ ರಾಜಕೀಯ ಬೆಳವಣಿಗೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
2019ರ ಲೋಕಸಭಾ ಚುನಾವಣಾ ಪೂರ್ವಮೈತ್ರಿಯಿಂದ ಕಾಂಗ್ರೆಸ್‍ಗಿಂತ ಜೆಡಿಎಸ್‍ಗೆ ಹೆಚ್ಚಿನ ಲಾಭವಾಗಲಿದ್ದು, ಮತಗಳ ಕ್ರೋಢೀಕರಣ ಲೆಕ್ಕಾಚಾರದಲ್ಲೂ ಮತ್ತೆ ಕಾಂಗ್ರೆಸ್‍ಗೆ ತೊಂದರೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಜೆಡಿಎಸ್‍ನೊಂದಿಗೆ ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಬೇಡ. ಮೈತ್ರಿ ಸರ್ಕಾರ ಮಾತ್ರವಿರಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸಂಸದ ಚಂದ್ರಪ್ಪ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಮೊದಲೇ ಸಂಸದರ ಸಭೆ ನಡೆಸಿ ಚುನಾವಣಾ ಪೂರ್ವ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಏಳು ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದ್ದು, ಈ ಕ್ಷೇತ್ರಗಳಲ್ಲಿ ಕೆಲವೆಡೆ ಹಾಲಿ ಕಾಂಗ್ರೆಸ್ ಸಂಸದರಿದ್ದರೆ, ಮತ್ತೆ ಕೆಲವೆಡೆ ಜೆಡಿಎಸ್‍ಗೆ ಬಿಟ್ಟುಕೊಡುವ ಸ್ಥಿತಿ ಇಲ್ಲಿ ಇದೆ. ಈ ನಿಟ್ಟಿನಲ್ಲಿ ಸಭೆ ನಡೆಸಿರುವ ಸಂಸದರು ಹೈಕಮಾಂಡ್ ಮೇಲೆ ಮೈತ್ರಿ ಮಾಡಿಕೊಳ್ಳದಂತೆ ಒತ್ತಡ ಹೇರಿದ್ದಾರೆ.
ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಈಗಾಗಲೇ ನಿರ್ಧಾರ ಮಾಡಲಾಗಿದ್ದರೂ ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಜೆಡಿಎಸ್ ಹಳೆ ಮೈಸೂರು ಭಾಗದ ಸ್ಥಾನಗಳನ್ನು ಬಿಟ್ಟುಕೊಡುವಂತೆ ಕೇಳುತ್ತಿದ್ದು, ಇದರಲ್ಲಿ ಈಗಾಗಲೇ ಮಂಡ್ಯ ಮತ್ತು ಹಾಸನ ಕ್ಷೇತ್ರಗಳು ಜೆಡಿಎಸ್ ಮುಷ್ಠಿಯಲ್ಲಿವೆ. ಈ ಬಾರಿ ಹಾಸನದಿಂದ ಪ್ರಜ್ವಲ್ ರೇವಣ್ಣ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಲು ಮುಂದಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರು ಗ್ರಾಮಾಂತರದಲ್ಲಿ ಸ್ವತಃ ಅವರೇ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ.
ಈ ನಡುವೆ ಬೆಂಗಳೂರು ಗ್ರಾಮಾಂತರದ ಸಂಸದ ಡಿ.ಕೆ.ಸುರೇಶ್ ರಾಜ್ಯ ರಾಜಕೀಯಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದು, ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾಗಿ ಈ ಕ್ಷೇತ್ರ ಜೆಡಿಎಸ್‍ಗೆ ಕೊಟ್ಟರೂ ಉಳಿದ ಕಡೆ ಅಂತಹ ಪರಿಸ್ಥಿತಿ ಇಲ್ಲ.
ಮೈಸೂರಿನಲ್ಲಿ ಜೆಡಿಎಸ್-ಕಾಂಗ್ರೆಸ್ ಪ್ರಮುಖವಾಗಿದ್ದರೂ ಪ್ರಸ್ತುತ ಬಿಜೆಪಿ ಸಂಸದರಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದತ್ತ ಚಿತ್ತ ಹರಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿದರೆ ಜೆಡಿಎಸ್‍ಗೆ ಈ ಸ್ಥಾನ ಬಿಟ್ಟುಕೊಡಲು ಸಾಧ್ಯವಾಗುವುದಿಲ್ಲ. ಇನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹಾಲಿ ಸಂಸದರಿದ್ದು, ಈ ಭಾಗದಲ್ಲೂ ಜೆಡಿಎಸ್ ಮೈತ್ರಿ ಸಾಧ್ಯವಾಗುವುದಿಲ್ಲ.
ಉಳಿದ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿಲ್ಲ. ಹಾಗಾಗಿ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿದರೂ ಸ್ಪರ್ಧಿಸಲು ಅವರೇ ಮುಂದೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಅನಗತ್ಯ ಎಂದು ಹಿರಿಯ ನಾಯಕರು ಹೇಳುತ್ತಿದ್ದಾರೆ.
ಈ ನಡುವೆ ಕೆ.ಸಿ.ವೇಣುಗೋಪಾಲ್ ಅವರು ಚುನಾವಣಾ ಪೂರ್ವ ಮೈತ್ರಿಗೆ ಹೆಚ್ಚು ಆಸಕ್ತಿ ವಹಿಸಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಮಾತುಕತೆಗೂ ಮುಂದಾಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿಗೂ ಮುಂದಾಗುವುದೇ, ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಹಿರಿಯ ನಾಯಕರು ಹಾಗೂ ಸಂಸದರಿಂದಲೇ ಮೈತ್ರಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದರಿಂದ ಬಜೆಟ್ ಅಧಿವೇಶನದ ನಂತರ ರಾಜ್ಯ ರಾಜಕಾರಣದಲ್ಲಿ ಆಗುವ ಬೆಳವಣಿಗೆಗಳನ್ನು ತಳ್ಳಿಹಾಕುವಂತಿಲ್ಲ.