ಬೆಂಗಳೂರು, ಜು.10-ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಾಳಾಗಿರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲೆಯ ಮುಖ್ಯರಸ್ತೆಗಳ ಗುಂಡಿಯನ್ನು ತ್ವರಿತವಾಗಿ ಮುಚ್ಚಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು.
ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅನುದಾನಕ್ಕೆ ಕಾಯದೆ ಕಾಲಮಿತಿಯೊಳಗೆ ಕೆಲಸ ಮುಗಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚನೆ ಕೊಟ್ಟಿದ್ದೇವೆ ಎಂದರು.
ಈಗ ಮಳೆಗಾಲವಾಗಿರುವುದರಿಂದ ಗುಂಡಿಗಳಿಗೆ ಗ್ರಾವಲ್ ಮತ್ತು ಜಲ್ಲಿ ಹಾಕಲು ಸೂಚನೆ ಕೊಡಲಾಗಿದೆ. ಅಕ್ಟೋಬರ್‍ನಲ್ಲಿ ಈ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು. ಯಾವ ಕಡೆ ಗುಂಡಿ ಇರುವುದೋ ಅಲ್ಲಿ ತಕ್ಷಣ ಮುಚ್ಚಬೇಕು. ಇದಕ್ಕೆ ಯಾರೊಬ್ಬರ ಅನುಮತಿಗೂ ಕಾಯಬೇಕಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.
ಕಳೆದ ಜೂ.11 ರಂದು ನನ್ನ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಹುಬ್ಭಳ್ಳಿ-ಬೆಳಗಾವಿ, ದಕ್ಷಿಣ ಕನ್ನಡ ಸೇರಿದಂತೆ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳನ್ನು ಸರಿಪಡಿಸಿ ಸುಗಮಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದ್ದೇವೆ. ಗುಂಡಿ ಮುಚ್ಚಲು ಸಮಗ್ರ ಯೋಜನೆ ರೂಪಿಸಲಾಗುವುದು ಎಂದರು.
ರಾಜ್ಯ ಮತ್ತು ಜಿಲ್ಲಾ ಮುಖ್ಯರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಾಕಲಾಗಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಅನೇಕ ಕಡೆ ಅವೈಜ್ಞಾನಿಕವಾಗಿ 86 ಸೇತುವೆಗಳು ಹಾಳಾಗಿದ್ದು, ಇವುಗಳನ್ನು 272.73 ಲಕ್ಷಗಳಲ್ಲಿ ತುರ್ತು ದುರಸ್ತಿ ಹಾಗೂ 1427.30 ಲಕ್ಷಗಳ ಅಂದಾಜು ಮೊತ್ತದಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು. ಎಲ್ಲೆಲ್ಲಿ ಸೇತುವೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಅಂತಹ ಕಡೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಾಗಿ ಹೇಳಿದರು.