ಬೆಂಗಳೂರು ಮೈಸೂರು ನಡುವೆ 10 ಪಥ ರಸ್ತೆ ನಿರ್ಮಾಣ

 

ಬೆಂಗಳೂರು, ಜು.10- ಬೆಂಗಳೂರಿನಿಂದ-ಮೈಸೂರುವರೆಗೆ 10 ಪಥ ಒಳಗೊಂಡ ರಸ್ತೆ ನಿರ್ಮಿಸಲು ಯೋಜನಾ ವರದಿ ಸಿದ್ಧಗೊಂಡಿದ್ದು, ಎರಡು ಪ್ಯಾಕೇಜ್‍ಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಧಾನ ಪರಿಷತ್‍ನಲ್ಲಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನಾ ವರದಿಯು ತಡೆರಹಿತ ವಾಹನ ಸಂಚಾರಕ್ಕಾಗಿ 6 ಪಥದ ಹೆದ್ದಾರಿ ಹಾಗೂ ಗ್ರಾಮೀಣ ವಾಹನ ಸಂಚಾರಕ್ಕಾಗಿ ಹೆದ್ದಾರಿಯ ಎರಡು ಬದಿಗಳಲ್ಲಿ 2 ಪಥದ ಸೇವಾ ರಸ್ತೆ ಒಳಗೊಂಡಿರುತ್ತದೆ.
3501 ಕೋಟಿ ರೂ.ಗಳ ಪ್ಯಾಕೇಜ್ 1ರ ಕಾಮಗಾರಿ, ಬೆಂಗಳೂರು-ನಿಡಘಟ್ಟ ವಿಭಾಗ ಹಾಗೂ ನಿಡಘಟ್ಟ-ಮೈಸೂರು ವಿಭಾಗ 2911 ಕೋಟಿ ರೂ.ಗಳ ಕಾಮಗಾರಿಗೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದೆ.
ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಈ ಎರಡೂ ಪ್ಯಾಕೇಜ್‍ಗಳನ್ನು ಈಗಾಗಲೇ ವಹಿಸಿಕೊಡಲಾಗಿದ್ದು, ಸದ್ಯದಲ್ಲೇ ಪ್ರಾರಂಭಗೊಳ್ಳಲಿವೆ.
ಶೇ.64ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಕೂಡ ಮುಗಿದಿದೆ. ಮುಂದಿನ ಒಂದು-ಒಂದೂವರೆ ವರ್ಷದೊಳಗೆ ಒಂದು ಹಂತದ ಪ್ರಕ್ರಿಯೆ ಮುಗಿಯಲಿದೆ ಎಂದು ಸಚಿವ ರೇವಣ್ಣ ಸದನಕ್ಕೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ