ಉಡ್ತಾ ಬೆಂಗಳೂರಿಗೆ ಅವಕಾಶ ನೀಡಲ್ಲ: ಪರಂ

 

ಬೆಂಗಳೂರು, ಜು.10- ಕಠಿಣ ಕಾನೂನು ಕ್ರಮಗಳ ಮೂಲಕ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟವನ್ನು ನಿಯಂತ್ರಿಸಲಾಗುವುದು. ರಾಜಧಾನಿ ಬೆಂಗಳೂರನ್ನು ಉಡ್ತಾ ಪಂಜಾಬ್ ಆಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗೃಹ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರಾದ ಕೆ.ಪ್ರತಾಪ್ ಚಂದ್ರಶೆಟ್ಟಿ, ಐವಾನ್ ಡಿಸೋಜಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಾಂಜಾ, ಅಫೀಮು ವಿಶ್ವದಾದ್ಯಂತ ಮಾರಾಟವಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಬಳಿ ಬೇರೆ ಬೇರೆ ದೇಶಗಳಿಂದ ಬಂದು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಕರಾವಳಿ ಭಾಗದಲ್ಲಿ ಹೆಚ್ಚು ಇಂತಹ ಪ್ರಕರಣಗಳು ಕೇಳಿಬಂದಿವೆ. ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ತಡೆಗಟ್ಟಲು ಇಲಾಖೆ ವತಿಯಿಂದ ಕಾನೂನು ಕ್ರಮ ಕೈಗೊಂಡು ನಿಯಂತ್ರಿಸಲಾಗುವುದು. ದೇಶದಲ್ಲಿ ಪಂಜಾಬ್ ರಾಜ್ಯ ಉಡ್ತಾ ಪಂಜಾಬ್ ಆಗಿದೆ. ರಾಜಧಾನಿ ಬೆಂಗಳೂರನ್ನು ಉಡ್ತಾ ಬೆಂಗಳೂರು ಆಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
ವಿಜಯನಗರ ಶಾಲೆಯೊಂದರ ಬಳಿ ಚಾಕೊಲೆಟ್ ಮೂಲಕ ಡ್ರಗ್ಸ್ ನೀಡುವ ಪ್ರಕರಣ ಪತ್ತೆಯಾಗಿತ್ತು. ಮೊದಲು ಮೂರು ದಿನ ಚಾಕೊಲೆಟ್ ನೀಡುತ್ತಾರೆ. ನಂತರ ಇದಕ್ಕೆ ಮಾರು ಹೋಗುವವರಿಗೆ ನೀಡುತ್ತಾರೆ. ಇಂತಹ ಪ್ರಕರಣವನ್ನು ಮಫ್ತಿನಲ್ಲಿ ನಮ್ಮ ಪೆÇಲೀಸರು ಪತ್ತೆಹಚ್ಚಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಮಾದಕ ವಸ್ತು ಮಾರಾಟಗಾರರ ವಿರುದ್ಧ 56 ಪ್ರಕರಣಗಳನ್ನು ದಾಖಲಿಸಲಾಗಿದೆ. ಗಾಂಜಾ, ಚರಸ್, ಒಪಿಎಂ ಮಾರಾಟ ಸಂಬಂಧ 5 ಕೋಟಿ ಮೌಲ್ಯದ ಡ್ರಗ್ಸ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನಗರದ ಹಲವೆಡೆ ಕೆಲವು ಔಷಧ ವ್ಯಾಪಾರಿಗಳು ಫಾರ್ಮಾಸ್ ಸ್ನೂಟಿಕಲ್ಸ್ ಬೋರ್ಡ್ ಎಂದು ಹಾಕಿಕೊಂಡಿರುತ್ತಾರೆ. ಆದರೆ, ಅಲ್ಲಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಇದು ಕಳವಳಕಾರಿಯಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ 2484 ಪ್ರಕರಣಗಳು ದಾಖಲಾಗಿದ್ದು, 182 ಪ್ರಕರಣಗಳು ವಿಲೇವಾರಿಯಾಗಿವೆ. 142 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 40 ಪ್ರಕರಣಗಳು ಖುಲಾಸೆಗೊಂಡಿವೆ. ಇನ್ನುಳಿದ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂದು ಅವರು ಹೇಳಿದರು.
ಸಾರ್ವಜನಿಕ ಸ್ಥಳಗಳು, ಶಾಲಾ-ಕಾಲೇಜು ಬಳಿ ಸಿಗರೇಟ್ ಮತ್ತು ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವ ಮತ್ತು ಸಾರ್ವಜನಿಕವಾಗಿ ಬಳಕೆ ಮಾಡುವವರ ವಿರುದ್ಧ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಮಾದಕ ದ್ರವ್ಯ ಜಾಲ ಕುರಿತು ಗೌಪ್ಯ ಮಾಹಿತಿ ಕಲೆ ಹಾಕಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಇದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪ್ರತಿ ಘಟಕಗಳಲ್ಲಿ ಅಪರಾಧ ಪೆÇಲೀಸ್ ಠಾಣೆಗಳನ್ನು ತೆರೆಯಲಾಗಿದ್ದು, ಮಾದಕ ದ್ರವ್ಯ ಅಕ್ರಮ ಸಾಗಾಣಿಕೆ ಬಗ್ಗೆ ವಿಶೇಷವಾಗಿ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.
ಹಣ ಮಾಡುವ ಉದ್ದೇಶಕ್ಕೋಸ್ಕರ ಮಾದಕ ದ್ರವ್ಯ ದಂಧೆ ನಡೆಯುತ್ತಿದೆ. ಇದರಲ್ಲಿ ಅಂತಾರಾಷ್ಟ್ರೀಯ ಭೂಗತ ಚಟುವಟಿಕೆಯ ಜಾಲವಿಲ್ಲ ಎಂದು ಸದಸ್ಯರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಹಾಸನ, ಚಿಕ್ಕಮಗಳೂರು, ಬೆಳಗಾವಿ ಇನ್ನಿತರ ಕಡೆ ಗಾಂಜಾ ಬೆಳೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅದರ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ