ಬೆಂಗಳೂರು, ಜು.10- ಸಚಿವರ ಬದಲಾಗಿ ಸದಸ್ಯರೊಬ್ಬರು ಸದನದಲ್ಲಿ ಉತ್ತರ ಕೊಟ್ಟರೆ ಹೇಗೆ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪ್ರಶ್ನಿಸಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಉತ್ತರ ನೀಡಿದ ನಂತರ ಮಾಜಿ ಸಚಿವ ತನ್ವೀರ್‍ಸೇಠ್ ಅವರು ಪೂರಕವಾಗಿ ಮಾಹಿತಿ ನೀಡುತ್ತಿದ್ದಾಗ ಲಿಂಬಾವಳಿ ಈ ಪ್ರಶ್ನೆ ಎತ್ತಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಸಚಿವರನ್ನು ಬಿಟ್ಟು ಸದಸ್ಯರು ಉತ್ತರ ಕೊಡುತ್ತಿದ್ದಾರೆ. ಇದು ತಮಗೆ ಅರ್ಥವಾಗುತ್ತಿಲ್ಲ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷರನ್ನು ಕೋರಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ಮಂತ್ರಿ ಸ್ಥಾನ ಕಳೆದುಕೊಂಡ ನೋವಲ್ಲಿ ತನ್ವೀರ್‍ಸೇಠ್ ಇದ್ದಾರೆ ಎಂದು ಛೇಡಿಸಿದರು.
ಮತ್ತೆ ಮಾತು ಮುಂದುವರೆಸಿ ಲಿಂಬಾವಳಿ, ತನ್ವೀರ್ ಸೇಠ್ ಅವರನ್ನು ಮಂತ್ರಿ ಮಾಡುತ್ತಿಲ್ಲ ಎಂಬುದು ನನಗೆ ಗೊತ್ತಿರಲಿಲ್ಲ ಎಂದರು.
ಆಗ ಮಧ್ಯ ಪ್ರವೇಶಿಸಿದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರು, ಸದಸ್ಯರು ಉತ್ತರ ಕೊಡುತ್ತಿಲ್ಲ. ಪೂರಕವಾದ ಮಾಹಿತಿಯನ್ನು ನೀಡುತ್ತಿದ್ದಾರೆ ಅಷ್ಟೆ ಎಂದು ಸಮಜಾಹಿಷಿ ನೀಡಿದರು.
ಮಾಜಿ ಸಚಿವ ತನ್ವೀರ್‍ಸೇಠ್ ಮಾತನಾಡಿ, ರಾಜ್ಯದ ಎರಡೂವರೆ ಸಾವಿರ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯಾಬಲದ ಆಧಾರದ ಮೇಲೆ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಸದನಕ್ಕೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿ. ಅದಕ್ಕೆ ಸಚಿವರು ಉತ್ತರ ಕೊಡುತ್ತಾರೆ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವ ಮಹೇಶ್ ಅವರು, ಶಾಸಕರು ಉತ್ತರ ನೀಡುತ್ತಿಲ್ಲ. ಪೂರಕ ಮಾಹಿತಿಯನ್ನಷ್ಟೇ ನೀಡುತ್ತಿದ್ದಾರೆ ಎಂದು ಚರ್ಚೆಗೆ ತೆರೆ ಎಳೆದರು.