ಮಲೆನಾಡು ಭಾಗದಲ್ಲಿ ಸಿಎಂ ವಾಸ್ತವ್ಯ

 

ಬೆಂಗಳೂರು, ಜು.10-ರಾಜ್ಯ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡಿ ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಮಲೆನಾಡು ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಮೂಲಸೌಲಭ್ಯ ಒದಗಿಸಲು ಆದೇಶ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ತೀರ್ಥಹಳ್ಳಿ ತಾಲ್ಲೂಕಿನ ಕೆಂದಾಳು ಬಯಲು ಗ್ರಾಮದ ಬಳಿ ಆಶಿಕಾ ಎಂಬ ವಿದ್ಯಾರ್ಥಿನಿ ತನ್ನ ತಾಯಿ ಎದುರೇ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆಯನ್ನು ಸರ್ಕಾರ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿಯ ಕುಟುಂಬಕ್ಕೆ ಶಿಕ್ಷಕರ ಅಭಿವೃದ್ಧಿ ನಿದಿಯಿಂದ ಒಂದು ಲಕ್ಷ ರೂ., ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚಿನ ನೆರವು ನೀಡುವುದು ಒಂದು ಭಾಗವಾದರೆ, ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತೊಂದು ಭಾಗ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ನೀರಿನಲ್ಲಿ ಕೊಚ್ಚಿ ಹೋದ ಸ್ಥಳದ ಕಾಲು ದಾರಿ ಕುಸಿದಿದೆ. ಆ ಭಾಗದಲ್ಲಿ ಅಡಿಕೆ ಮರಗಳನ್ನು ಇಟ್ಟಿದ್ದಾರೆ. ತಡೆಗೋಡೆಗಳಿಲ್ಲ. ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿದ್ದು, ಮುರಿದಿರುವ ಕಾಲು ದಾರಿ ಸರಿ ಮಾಡಿ ತಡೆ ಗೋಡೆ ಕಟ್ಟಲು ನಿರ್ದೇಶನ ನೀಡಲಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಹಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲಾ-ಕಾಲೇಜುಗಳ ಕಟ್ಟಡಕ್ಕೆ 750 ಕೋಟಿ:
ರಾಜ್ಯದ 102 ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಿಸಲು 500 ಕೋಟಿ ಅನುದಾನ ಒದಗಿಸಲಾಗುವುದು. ಪ್ರಾಥಮಿಕ ಶಾಲಾ ಕಟ್ಟಡಗಳಿಗೆ 250 ಕೋಟಿ ರೂ. ವೆಚ್ಚ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಲಾ-ಕಾಲೇಜುಗಳ ಕಟ್ಟಡ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನಬಾರ್ಡ್‍ನಿಂದ ಹೆಚ್ಚಿನ ಅನುದಾನವನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ ಅವರು, ತಾಯಿಯ ಕಣ್ಣೆದುರೇ ವಿದ್ಯಾರ್ಥಿನಿ ಕೊಚ್ಚಿ ಹೋಗಿದ್ದು, ಅವರ ಕುಟುಬಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಮಲೆನಾಡು ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಬೇಕು. ಇಂತಹ ಘಟನೆಗಳು ಮರುಕಳುಹಿಸದಂತೆ ಪರಿಹಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಮಲೆನಾಡು ಭಾಗದ ಹಲವು ಶಾಸಕರು ದನಿಗೂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ