ಬಿ.ಎ.ಮೊಹಿದ್ಧೀನ್ ನಿಧನಕ್ಕೆ ಸಂತಾಪ

 

ಬೆಂಗಳೂರು, ಜು.10- ಮಾಜಿ ಸಚಿವ ಬಿ.ಎ.ಮೊಹಿದ್ದೀನ್ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ತೀವ್ರ ಸಂತಾಪ ವ್ಯಕ್ತಪಡಿಸಲಾಯಿತು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡು ಬಿ.ಎ.ಮೊಹಿದ್ದೀನ್ ಅವರು ನಿಧನರಾಗಿರುವುದನ್ನು ಸದನಕ್ಕೆ ತಿಳಿಸಿದರು.
1938ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕೊಲಂಬೆಯ ಗ್ರಾಮದಲ್ಲಿ ಜನಿಸಿದ ಮೊಹಿದ್ದೀನ್ ಬಿಎಸ್ಸಿ ಪದವೀಧರರಾಗಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. ಕರ್ನಾಟಕ ಸಹಕಾರ ಗ್ರಾಹಕರ ಒಕ್ಕೂಟದ ಉಪಾಧ್ಯಕ್ಷರಾಗಿ ಮತ್ತು ಹಲವು ಸಹಕಾರ ಸಂಘಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1978ರಲ್ಲಿ ಭಂಟ್ವಾಳ ಕ್ಷೇತ್ರದಿಂದ ಆರನೇ ವಿಧಾನಸಭೆಗೆ ಚುನಾಯಿತರಾಗಿ ಕಾರ್ಯ ನಿರ್ವಹಿಸಿದ್ದರು. 1990ರಿಂದ 2002ರ ಅವಧಿಯಲ್ಲಿ ಎರಡು ಬಾರಿ ವಿಧಾನಪರಿಷತ್‍ನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಮೊಹಿದ್ದೀನ್, 1995ರಿಂದ 96ವರೆಗೆ ವಿಧಾನಪರಿಷತ್‍ನ ಮುಖ್ಯ ಸಚೇತಕರಾಗಿ, 1996ರಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿ, 1999ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು.
ಸರಳ , ಸಜ್ಜನ, ಸ್ನೇಹಮಯಿಯಾಗಿದ್ದ ಮೊಹಿದ್ದೀನ್ ನಿಧನದಿಂದ ತುಂಬಲಾರದ ನಷ್ಟವಾಗಿದೆ. ತಮ್ಮ ಹಾಗೂ ಅವರ ಒಡನಾಟ 46 ವರ್ಷಗಳಷ್ಟು ಸುದೀರ್ಘವಾದದ್ದು, ಸಾರ್ವಜನಿಕ ಭೂಪಟದ ನಕ್ಷತ್ರ ಇಂದು ಮಾಯವಾಗಿದೆ. ಅದ್ಭುತ ಮನುಷ್ಯ. 1983ರಲ್ಲಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿದ್ದ ಅಜಿತ್ ಸೇಠ್ ರಾಜೀನಾಮೆ ನೀಡಿದಾಗ ಆ ಸ್ಥಾನ ಮೊಹಿದ್ದೀನ್‍ಗೆ ನೀಡಲು ಒಪ್ಪಿಸುವಂತೆ ತಮಗೆ ಜವಾಬ್ದಾರಿ ವಹಿಸಲಾಗಿತ್ತು. ಮನೆ ಬಾಗಿಲಿಗೆ ಬಂದ ಅಧಿಕಾರವನ್ನು ಅವರು ನಿರಾಕರಿಸಿದ್ದರು.
ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರು ಸ್ಪರ್ಧೆ ಮಾಡಿದ್ದಾಗ ಆಗಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಹಣಕಾಸಿನ ಜವಾಬ್ದಾರಿಯನ್ನು ಮೊಹಿದ್ದೀನ್ ಅವರಿಗೆ ವಹಿಸಿದ್ದರು.
ರಾಮಜನ್ಮ ಭೂಮಿ ವಿವಾದ ಉತ್ತುಂಗಕ್ಕೆ ಏರಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕರಾವಳಿಯಲ್ಲಿ ನಿರ್ವಹಿಸಿದ ಕೆಲಸ ಮೆಚ್ಚುಗೆಗೆ ಪಾತ್ರವಾಗಿತ್ತು. ತಮ್ಮ ಹಿರಿಯ ಸಹೋದರನಷ್ಟೇ ಸ್ಥಾನವನ್ನು ನನ್ನ ವೈಯಕ್ತಿಕ ಬದುಕಿನಲ್ಲಿ ಅವರಿಗೆ ನೀಡಿದ್ದೆ. ಅಂತ್ಯ ಸಂಸ್ಕಾರದಲ್ಲಿ ತಾವು ಪಾಲ್ಗೊಳ್ಳಬೇಕಾಗಿರುವುದರಿಂದ ಸದನದ ಒಪ್ಪಿಗೆ ಪಡೆದು ನಿರ್ಗಮಿಸುವುದಾಗಿ ಹೇಳಿದರು.
ಸಭಾನಾಯಕರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಇಂದು ಬೆಳಗಿನ ಜಾವ ಮಾಜಿ ಸಚಿವರಾದ ಮೊಹಿದ್ದೀನ್ ಅವರ ನಿಧನ ದುಃಖವನ್ನು ಉಂಟು ಮಾಡಿದೆ. ಸರಳ ಜೀವಿಯಾಗಿದ್ದ ಅವರು ಸಣ್ಣಕೈಗಾರಿಕೆ ಮತ್ತು ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕೋರಿದರು.
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಾಜಿ ಸಚಿವ ಮೊಹಿದ್ದೀನ್ ಅವರು ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ, ವಿಧಾನಪರಿಷತ್‍ನ ಮುಖ್ಯ ಸಚೇತಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದ ಪ್ರಾಮಾಣಿಕ ವ್ಯಕ್ತಿ. ಅವರನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದು ವಿಷಾದಿಸಿದರು.
ಮೃತರ ಗೌರವಾರ್ಥ ಸದನದ ಸದಸ್ಯರೆಲ್ಲರೂ ಎದ್ದು ನಿಂತು ಕೆಲ ಕಾಲ ಮೌನ ಆಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ