ನವದೆಹಲಿ, ಜು.9- ಕಲಿಯುಗ ಅಂತ್ಯಕ್ಕೆ ಕಾಲ ಸನ್ನಿಹಿತವಾಯಿತೇ..? ಇದೇ 27ರಂದು ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ನಂತರ ಇಡೀ ಭೂ ಮಂಡಲ ನಶಿಸಿ ಹೋಗುವುದೇ..? ಇಂತಹ ಒಂದು ತರ್ಕ ಎಲ್ಲೆಡೆ ಕೇಳಿಬರುತ್ತಿದೆ. ಜುಲೈ ತಿಂಗಳಿನಲ್ಲೇ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವಾಗುತ್ತಿರುವುದು ಹಾಗೂ ಮಂಗಳ ಗ್ರಹ ಭೂಮಿಯ ಅತ್ಯಂತ ಸಮೀಪಕ್ಕೆ ಬರುತ್ತಿರುವುದು ಕಲಿಯುಗದ ಅಂತ್ಯಕ್ಕೆ ಮುನ್ನುಡಿ ಎಂದು ಕೆಲವರು ಭಾವಿಸುತ್ತಿದ್ದಾರೆ.
ಆದರೆ, ಈ ಎಲ್ಲ ಘಟನೆಗಳೂ ಪ್ರಕೃತಿಯ ವಿಸ್ಮಯ. ಗ್ರಹಣದ ಸಂದರ್ಭದಲ್ಲಿ ಭೂಮಿಗೆ ಯಾವುದೇ ಆಪತ್ತು ಬರುವುದಿಲ್ಲ ಎಂದು ವಾದ ಮಂಡಿಸುತ್ತಿದ್ದಾರೆ ವಿಜ್ಞಾನಿಗಳು. ಇದೇ 13ರಂದು ಸೂರ್ಯ ಗ್ರಹಣವಾಗಲಿದ್ದು, 27ರಂದು ಚಂದ್ರ ಗ್ರಹಣವಾಗಲಿದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರನ ಬಿಂಬ ರಕ್ತದಂತೆ ಕಂಡುಬರುವುದರಿಂದ ಅದನ್ನು ಬ್ಲಡ್ಮೂನ್ ಎಂದೇ ಕರೆಯಲಾಗುತ್ತಿದೆ.
ಬೈಬಲ್ನಲ್ಲಿ ಬ್ಲಡ್ಮೂನ್ ಕಂಡುಬಂದ ದಿನವೇ ಭೂಮಿಯ ಆಯಸ್ಸು ಪೂರ್ಣಗೊಳ್ಳಲಿದೆ ಎಂಬ ಅಂಶವಿರುವ ಹಿನ್ನೆಲೆಯಲ್ಲಿ ಇದೇ 27ರಂದು ಸಂಭವಿಸಲಿರುವ ಚಂದ್ರಗ್ರಹಣದ ನಂತರ ಭೂಮಿ ನಶಿಸಿಹೋಗಲಿದೆ.
ಚಂದ್ರ ಗ್ರಹಣದ ಸಂದರ್ಭದಲ್ಲೇ ಮಂಗಳ ಗ್ರಹ ಭೂಮಿಯ ಅತ್ಯಂತ ಸಮೀಪದಲ್ಲೇ ಹಾದು ಹೋಗುತ್ತಿರುವುದು ವಿನಾಶದ ಸಂಕೇತ. ಹೀಗಾಗಿ 27ರ ನಂತರ ಭೂಮಿ ನಾಶವಾದರೂ ಆಶ್ಚರ್ಯಪಡುವಂತಿಲ್ಲ ಎನ್ನುತ್ತಾರೆ ಅಮೆರಿಕದ ಪಾದ್ರಿ ಫೌಲ್ ಬೆಗ್ಲೆ ಅಭಿಪ್ರಾಯಪಟ್ಟಿದ್ದಾರೆ.
ಕಲಿಯುಗ ಅಂತ್ಯಗೊಂಡು ಎರಡನೆ ಏಸುಕ್ರಿಸ್ತ ಪುನರ್ ಅವತರಿಸಲು ಕಾಲ ಸನ್ನಿಹಿತವಾಗಿದೆ. ಹವಾಯಿ ದ್ವೀಪದಲ್ಲಿ ಜ್ವಾಲಾಮುಖಿ ಕಾಣಿಸಿಕೊಳ್ಳುತ್ತಿರುವುದು, ಮಂಗಳ ಗ್ರಹದಲ್ಲಿ ಧೂಳಿನ ಬಿರುಗಾಳಿ ಬೀಸುತ್ತಿರುವುದು, ಬ್ಲಡ್ಮೂನ್ ಕಾಣಿಸಿಕೊಳ್ಳುತ್ತಿರುವುದು ಭೂಮಿ ವಿನಾಶದ ಸಂಕೇತ ಎನ್ನುತ್ತಾರೆ ಬೇಗ್ಲೆ.
ನಾನು ಯಾರನ್ನೂ ಬೆದರಿಸಬೇಕು ಎಂದು ಇಂತಹ ಹೇಳಿಕೆ ನೀಡುತ್ತಿಲ್ಲ. ಬೈಬಲ್ ನೀಡಿರುವ ಭೂಮಿ ವಿನಾಶದ ಮುನ್ಸೂಚನೆಯನ್ನು ತಿಳಿಸುತ್ತಿದ್ದೇನೆ. ಭೂಮಿ ನಾಶವಾದ ನಂತರ ಸೂರ್ಯನಿಂದ ಜನಿಸುವ ಪ್ರಜ್ವಲಮಾನ ವ್ಯಕ್ತಿಯೊಬ್ಬ ಮೋಡದಿಂದ ಧರೆಗಿಳಿದು ಬಂದು ಮತ್ತೊಂದು ಯುಗಕ್ಕೆ ಮುನ್ನುಡಿ ಬರೆಯುತ್ತಾನೆ ಎನ್ನುವುದನ್ನು ಬೈಬಲ್ನಲ್ಲಿ ಉಲ್ಲೇಖಿಸಲಾಗಿದೆ. ಆ ಅಂಶವನ್ನೇ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ ಎನ್ನುವುದು ಬೇಗ್ಲೆ ವಾದವಾಗಿದೆ.
ಆದರೆ, ಈ ಮಾತನ್ನು ಒಪ್ಪದ ಇಂಡಿಯಾನ ಮೂಲದ ಪ್ರೀಚರ್ ಒಬ್ಬರು 27ರ ನಂತರ ಭೂಮಿ ನಾಶವಾಗುವುದಿಲ್ಲ. ಬೈಬಲ್ನಲ್ಲಿ ಪ್ರಸ್ತಾಪವಾಗಿರುವುದು ಸೂರ್ಯ-ಚಂದ್ರ ಮತ್ತು ನಕ್ಷತ್ರಗಳ ಸಂಕೇತವೇ ಹೊರತು ವಿನಾಶದ ಮುನ್ಸೂಚನೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
27ರ ಚಂದ್ರಗ್ರಹಣದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲೆ ಬೀಳುವುದರಿಂದ ಆ ಸಂದರ್ಭದಲ್ಲಿ ಚಂದ್ರ ರಕ್ತಕಾಂತಿಯಿಂದ ಕಂಗೊಳಿಸುತ್ತಾನೆ. ಇದೇ ಸಂದರ್ಭದಲ್ಲಿ ಮಂಗಳಗ್ರಹ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗುವುದು ಪ್ರಕೃತಿಯ ವಿಸ್ಮಯವಷ್ಟೆ. ಇದನ್ನೇ ಕೆಲವರು ಭೂಮಿ ವಿನಾಶಕ್ಕೆ ಕಾಲ ಸನ್ನಿಹಿತ ಎಂದೇ ಬಿಂಬಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಈ ಹಿಂದೆ ಕೆಲವು ತತ್ವಜ್ಞಾನಿಗಳು ಭೂ ವಿನಾಶಕ್ಕೆ ಕಾಲ ಸನ್ನಿಹಿತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇಡೀ ವಿಶ್ವವೇ ನಾಶ ಹೊಂದಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಇದುವರೆಗೂ ಅಂತಹ ಯಾವುದೇ ಭವಿಷ್ಯ ನಿಜವಾಗಿಲ್ಲ. ಇದೀಗ ಮತ್ತೊಮ್ಮೆ ಕೆಲವರು 27ರ ಚಂದ್ರಗ್ರಹಣದ ನಂತರ ಭೂಮಿ ನಾಶವಾಗಲಿದೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಯಾವುದೇ ಭಯ ಪಡುವ ಅವಶ್ಯಕತೆಯಿಲ್ಲ ಎನ್ನುತ್ತಿದ್ದಾರೆ. ಆದರೆ, ಚಂದ್ರ ಗ್ರಹಣದ ನಂತರ ಏನಾಗುವುದೋ ಎನ್ನುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.