ಬೆಂಗಳೂರು, ಜು.9-ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಾವೇರಿ, ಕಪಿಲಾ ಹಾಗೂ ಹೇಮಾವತಿ ನದಿಗಳಲ್ಲಿ ನೀರಿನ ಪ್ರಮಾಣವು ಹೆಚ್ಚಾಗಿದೆ.
ಕೆಆರ್‍ಎಸ್ ಜಲಾಶಯದಲ್ಲಿ ಇಂದು ನೀರಿನ ಮಟ್ಟ 110.40 ಅಡಿಗೆ ತಲುಪಿದೆ. ಗರಿಷ್ಠ 124.80 ಅಡಿ ಸಾಮಥ್ರ್ಯದ ಈ ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್‍ಗೂ ಹೆಚ್ಚು ಒಳಹರಿವು ಇದೆ. ಸುಮಾರು ಮೂರೂವರೆ ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‍ಎಸ್ ಜಲಾಶಯದಲ್ಲಿ 78.05 ಅಡಿ ಮಾತ್ರ ನೀರಿತ್ತು. ಆಗ 4 ಸಾವಿರ ಕ್ಯೂಸೆಕ್ ಮಾತ್ರ ಒಳಹರಿವಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 32 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
ಹೇಮಾವತಿ ಜಲಾಶಯದಲ್ಲಿ ಇಂದು 2,909.62 ಅಡಿ ನೀರು ಸಂಗ್ರಹವಾಗಿದೆ. 8,047 ಕ್ಯೂಸೆಕ್ ಒಳಹರಿವು ಇದೆ. ಈ ಜಲಾಶಯದ ಗರಿಷ್ಠ ನೀರಿನ ಸಂಗ್ರಹದ ಪ್ರಮಾಣ 2,933 ಅಡಿಗಳಾಗಿದೆ. ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಇನ್ನು 12 ಅಡಿಗಳಷ್ಟು ನೀರು ಬರಬೇಕಿದೆ.
ಹಾರಂಗಿ ಜಲಾಶಯದಲ್ಲೂ ನೀರಿನ ಪ್ರಮಾಣ 2,857.43 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ನೀರಿನ ಪ್ರಮಾಣ 2,859 ಅಡಿಗಳು. ಇಂದಿನ ಒಳಹರಿವು 11,675 ಕ್ಯೂಸೆಕ್ ಇದ್ದು, ಬಹುತೇಕ ಭರ್ತಿಯಾದಂತಾಗಿದೆ.
ಈಗಾಗಲೇ ಕಬಿನಿ ಜಲಾಶಯದಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ. ಇದೇ ರೀತಿ ಜಲಾಶಯಗಳ ಒಳಹರಿವು ಮುಂದುವರೆದರೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.