ಜಾತಿ ನೋಡಿ ಸಹಾಯ ಮಾಡುವುದಿಲ್ಲ: ಎಚ್‍ಡಿಕೆ

 

ಬೆಂಗಳೂರು, ಜು.9- ಜನತಾ ದರ್ಶನದಲ್ಲಿ ತಮ್ಮನ್ನು ಭೇಟಿಯಾದ ವಿಕಲಚೇತನ ಹೆಣ್ಣುಮಗಳಿಗೆ ಉದ್ಯೋಗ ಕೊಡಿಸಲಾಗಿದ್ದು, ಅಲ್ಲಿ ಜಾತಿಯನ್ನು ನೋಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಜನತಾದರ್ಶನಕ್ಕೆ ವಿಕಲಚೇತನ ಹೆಣ್ಣುಮಗಳು, 68 ವರ್ಷದ ತಂದೆ, ಸುಮಾರು 90 ವರ್ಷದ ತಾತನೊಂದಿಗೆ ಬಂದಿದ್ದರು. ತಂದೆ ಮತ್ತು ತಾತ ಇಬ್ಬರಿಗೂ ನಿಂತು ಹೋಗಿದ್ದ ಮಾಸಾಶನವನ್ನು ಜಿಲ್ಲಾಧಿಕಾರಿಗಳ ಮೂಲಕ ಎರಡು ಗಂಟೆಯೊಳಗೆ ಕೊಡಿಸಲಾಗಿದೆ. ಆ ಹೆಣ್ಣು ಮಗಳ ಗಂಡ ಕೂಡ ಬಿಟ್ಟು ಹೋಗಿದ್ದಾನೆ. ಆಕೆಗೆ ಉದ್ಯೋಗ ಕೊಡಿಸಲಾಗಿದೆ. ಮುಖದಲ್ಲಿ ವಿಭೂತಿ ಹಚ್ಚಿಕೊಂಡಿರುವುದು ಇತ್ತು. ನಾನು ಅವರ ಸಂಕಷ್ಟ ನಿವಾರಿಸುವ ಕ್ರಮ ಕೈಗೊಂಡಾಗ ಯಾವ ಜಾತಿಗೆ ಸೇರಿದ್ದಾರೆ ಎಂದು ನೋಡಿಲ್ಲ. ತಮಗೆ ಜಾತಿ ಮುಖ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ