ಮಾಸ್ಕೋ, ಜು.9- ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆಲುವು ಯಾರ ಕೊರಳಿಗೆ ಬೀಳಲಿದೆ ಎಂಬುದು ಈಗ ಫುಟ್‍ಬಾಲ್ ಪ್ರೇಮಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ನಾಳೆ ರಾತ್ರಿ ನಡೆಯಲಿರುವ ಫ್ರಾನ್ಸ್ ಮತ್ತು ಬೆಲ್ಜಿಯಂ ನಡುವಿನ ಸೆಮಿ ಫೈನಲ್ ಪಂದ್ಯಕ್ಕೆ ಈಗಾಗಲೇ ಕೋಟ್ಯಾನು ಕೋಟಿ ಜನರು ಎದುರು ನೋಡುತ್ತಿದ್ದು, ನಿರೀಕ್ಷೆಯಂತೆ ಎರಡು ರಾಷ್ಟ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಇತಿಹಾಸವನ್ನು ಒಮ್ಮೆ ನೋಡಿದರೆ ಫ್ರಾನ್ಸ್ ಮೇಲುಗೈ ಸಾಧಿಸಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಲಿಷ್ಠ ತಂಡಗಳನ್ನು ಮಣಿಸಿರುವ ಬೆಲ್ಜಿಯಂ ಕೂಡ ಸಾಕಷ್ಟು ಚಾಣಾಕ್ಷ ಆಟಗಾರರನ್ನು ಹೊಂದಿರುವ ತಂಡವಾಗಿದೆ. 1986ರಲ್ಲಿ ನಡೆದ ವಿಶ್ವಕಪ್ ಫೈನಲ್‍ನಲ್ಲಿ ಇದೇ ತಂಡಗಳು ಪರಸ್ಪರ ಸೆಣೆಸಿದ್ದವು. ಆದರೆ ಫೆನಾಲ್ಟಿ ಶೂಟೌಟ್‍ನಲ್ಲಿ ಫ್ರಾನ್ಸ್ ಜಯ ಸಾಧಿಸಿತು. ಇನ್ನು ಇದಕ್ಕೂ ಹಿಂದೆ 1938ರಲ್ಲಿ ಬೆಲ್ಜಿಯಂ ಜಯ ಸಾಧಿಸಿತ್ತು.
ಇನ್ನು ತೀರಾ ಹತ್ತಿರ 2015ರಲ್ಲಿ ನಡೆದ ಸ್ನೇಹಮಯ ಪಂದ್ಯದಲ್ಲಿ ಬೆಲ್ಜಿಯಂ ಜಯ ಗಳಿಸಿತ್ತು. ಇಂತಹ ಕುತೂಹಲಕಾರಿ ಮಾಹಿತಿಗಳನ್ನು ಈಗ ಫುಟ್ಬಾಲ್ ಪಂಡಿತರು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದಾರೆ.
ಭವಿಷ್ಯಗಳನ್ನು ನಂಬುವುದಾದರೆ ಫ್ರಾನ್ಸ್‍ಗೆ ಈ ಬಾರಿ ವಿಶ್ವಕಪ್ ಕಿರೀಟ ನಿಶ್ಚಿತ ಎಂದು 2-1ರ ಅಂಕಿ ನೀಡಿದರೆ ಇತ್ತ ಬೆಲ್ಜಿಯಂಗೆ ಎರಡನೆ ಸ್ಥಾನದಲ್ಲಿ 5-2ರ ಸರಾಸರಿ ನೀಡಲಾಗಿದೆ. ಬೆಟ್ಟಿಂಗ್ ಕೂಡ ಜೋರಾಗಿದ್ದು , ಫ್ರಾನ್ಸ್ ಹಾಗೂ ಬೆಲ್ಜಿಯಂ ಪರ ಸಮಾನಾಂತರ ಹಣ ತೊಡಗಿಸಲಾಗುತ್ತಿದೆ. ಇದು ಯುಎಸ್ ಡಾಲರ್ ಮತ್ತು ಐರೋಪ್ಯ ಪೌಂಡ್ಸ್ ಗಳಲ್ಲಿ ಕೋಟಿಗಟ್ಟಲೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಲ್ಲದೆ ಪ್ರತಿಯೊಂದು ಗೋಲಿಗೂ ಇಂತಿಷ್ಟು ಹಣ ಮತ್ತು ಯಾರು ಮೊದಲು ಗೋಲು ಹೊಡೆಯುತ್ತಾರೆ ಎಂಬ ಬಗ್ಗೆಯೂ ಬೆಟ್ಟಿಂಗ್ ನಡೆಸಲಾಗಿದೆ. 2018ರ ಫೀಫಾ ವಿಶ್ವಕಪ್ ಆರಂಭಕ್ಕೆ ಮುನ್ನವೇ ಐರೋಪ್ಯ ರಾಷ್ಟ್ರದ ಫುಟ್ಬಾಲ್ ಕ್ರೀಡೆಯ ತಜ್ಞ ಡೇವಿಡ್ ಸಂಪ್ಟರ್ ಸೆಮಿಫೈನಲ್ ವೇಳೆಗೆ ಫ್ರಾನ್ಸ್-ಬೆಲ್ಜಿಯಂ ಎದುರಾಗಲಿದೆ ಎಂದು ಹೇಳಿದ್ದರಂತೆ. ಇವರನ್ನು ಸೋಕರ್‍ಮ್ಯಾಟಿಕ್ಸ್ ಪುಸ್ತಕದಲ್ಲಿ ಕೂಡ ಉಲ್ಲೇಖಿಸಿದ್ದಾರೆ.