ಹೊಸ ತಾಲ್ಲೂಕುಗಳಿಗೆ 10 ಲಕ್ಷ ಅನುದಾನ

Karnataka Medical Education Minister Sharan Prakash R Patil and Karnataka Higher Education Minister R V Deshpande declares CET results in Bangalore on May 27, 2014. (Photo: IANS)

 

ಬೆಂಗಳೂರು, ಜು.9-ರಾಜ್ಯದಲ್ಲಿ ಹೊಸದಾಗಿ ಘೋಷಿಸಲಾದ 50 ತಾಲೂಕುಗಳ ಕಾರ್ಯಾರಂಭ ಮತ್ತು ಆಡಳಿತಾತ್ಮಕ ಪ್ರಕ್ರಿಯೆ ಪ್ರಾರಂಭಿಸಲು ತಲಾ 10 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ವಿ.ಸುನೀಲ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ತಾಲೂಕುಗಳಲ್ಲಿ ತಾಲೂಕು ಕಚೇರಿ ಬಿಟ್ಟು ಬೇರೆ ಇಲಾಖೆ ಕಚೇರಿಗಳು ಪ್ರಾರಂಭವಾಗಿಲ್ಲ. ಯಾವ ಯಾವ ಇಲಾಖೆಗಳ ಕಚೇರಿಗಳು ತಾಲೂಕು ಮಟ್ಟದಲ್ಲಿ ಇರಬೇಕು ಎಂಬ ಪ್ರಸ್ತಾವನೆ ಕಳುಹಿಸಲು ಸೂಚಿಸಲಾಗಿದೆ. ಮೂಲಸೌಲಭ್ಯ ಒದಗಿಸಲು ಹಾಗೂ ಎಲ್ಲಾ ಇಲಾಖೆಗಳು ಕಾರ್ಯಾರಂಭ ಮಾಡಲು ಹೆಚ್ಚಿನ ಹಣದ ಅಗತ್ಯವಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಶೀಘ್ರವಾಗಿ ಪೂರ್ಣ ಪ್ರಮಾಣದಲ್ಲಿ ಹೊಸ ತಾಲೂಕುಗಳು ಕಾರ್ಯಾರಂಭ ಮಾಡಲು ಕ್ರಮಕೈಗೊಳ್ಳಲಾಗುವುದು.
ಮೂಲ ತಾಲೂಕಿನಿಂದ ಹೊಸ ತಾಲೂಕಿಗೆ ದಾಖಲೆಗಳ ವರ್ಗಾವಣೆಗೂ ಕ್ರಮಕೈಗೊಳ್ಳಲಾಗುವುದು ಎಂದು ಬಿಜೆಪಿ ಶಾಸಕರಾದ ಜಗದೀಶ್ ಶೆಟ್ಟರ್, ಸಿದ್ದು ಸವದಿ, ಎ.ಎಸ್.ಪಾಟೀಲ್ ನಡಹಳ್ಳಿ ಮತ್ತಿತರರ ಪ್ರಶ್ನೆಗೆ ಉತ್ತರಿಸಿದರು.
ತಹಶೀಲ್ದಾರ್ ವಿರುದ್ಧ ಕ್ರಮ : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭೂಕಂದಾಯ ಕಾಯ್ದೆಯಡಿ ನಮೂನೆ 53ರಲ್ಲಿ ಅರ್ಜಿಗಳನ್ನು ಇತ್ಯರ್ಥ ಪಡಿಸುವಾಗ ನಿಯಮಾವಳಿಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಬಿಜೆಪಿ ಜೆ.ಸಿ.ಮಾಧುಸ್ವಾಮಿ ಅವರ ಪ್ರಶ್ನೆಗೆ ಕಂದಾಯ ಸಚಿವರು ಉತ್ತರಿಸಿದರು.
ಅರ್ಜಿ ಇಲ್ಲದೆ, ಜಮೀನು ಮಂಜೂರು ಮಾಡಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆಯಾ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಬಗರ್‍ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಲು ಕ್ರಮವಹಿಸಲಾಗಿದೆ ಎಂದರು.,
ಈ ನಡುವೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಮಟ್ಟದ ವಿಶೇಷಾಧಿಕಾರಿಯನ್ನು ನೇಮಿಸುವಂತೆ ಸೂಚಿಸಿದರು. ಆ ಅಧಿಕಾರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಗಳ ಲೋಪದೋಷಗಳ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ