ಬೆಂಗಳೂರು, ಜು.9- ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಜೆಡಿಎಸ್-ಬಿಜೆಪಿ ಅಧಿಕಾರ ಹಂಚಿಕೆ ವಿಷಯ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಏರಿದ ಧ್ವನಿಯಲ್ಲಿ ವಾಕ್ಸಮರ ನಡೆದಿದ್ದಲ್ಲದೆ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಿಸಿತು.
ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಇಂದು ಸಿಎಂ ಉತ್ತರ ನೀಡಿದರು.
ನಂತರ ಉತ್ತರಕ್ಕೆ ಸ್ಪಷ್ಟನೆ ಕೇಳುವ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಮಾತಿನ ನಡುವೆ ನಂಬಿಕೆ ದ್ರೋಹ ಎಂಬುದು ಕುಮಾರಸ್ವಾಮಿ ಅವರಲ್ಲಿ ರಕ್ತಗತವಾಗಿದೆ ಎಂದು ತೀವ್ರ ಆರೋಪ ಮಾಡಿದರು.
ಇದರಿಂದ ಕೆರಳಿದ ಎಚ್ಡಿಕೆ ಪದೇ ಪದೇ ಈ ಮಾತನ್ನು ಬಿಎಸ್ವೈ ಬಳಸುತ್ತಿದ್ದಾರೆ. ಇದು ಸರಿಯಲ್ಲ ನಾನು ನನ್ನ ಸಿಎಂ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ನನಗೊಂದು ಸಚಿವ ಸ್ಥಾನ ಕೊಡಿ ಬಿಜೆಪಿ ಬಿಟ್ಟು ಬರುತ್ತೇನೆ ಎಂದು ಯಡಿಯೂರಪ್ಪನವರೇ ನಮ್ಮ ಮನೆಗೆ ಬಾಗಿಲಿಗೆ ಬಂದಿದ್ದರು ಎಂದು ತಿರುಗೇಟು ನೀಡಿದರು.
ಇದಕ್ಕೆ ಉತ್ತರ ನೀಡಿದ ಬಿಎಸ್ವೈ ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋದವನಲ್ಲ ಮಂತ್ರಿ ಮಾಡಿ ಎಂದು ನಿಮ್ಮ ಮನೆ ಬಾಗಿಲಿಗೂ ಬಂದಿರಲಿಲ್ಲ. ನೀವು ಹೇಳುತ್ತಿರುವುದು ಸುಳ್ಳು ಎಂದು ವಾದಿಸಿದರು.
ನನ್ನ ಮಾತಿನಲ್ಲಿ ಯಾವುದೇ ಅಸಂಬದ್ಧ ಪದಗಳನ್ನು ಬಳಸಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಮತ್ತು ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿರುವುದು ನಿಜ. ಅಧಿಕಾರಕ್ಕಾಗಿ ನಂಬಿಕೆ ದ್ರೋಹ ಮಾಡುವುದು ಅವರಲ್ಲಿ ರಕ್ತಗತವಾಗಿರುವ ಗುಣ ಎಂದು ಪುನರುಚ್ಚರಿಸಿದರು.
20 ತಿಂಗಳು ಉಪಮುಖ್ಯಮಂತ್ರಿಯಾಗಿ ನಾನು ಎಲ್ಲವನ್ನು ಸಹಿಸಿಕೊಂಡಿದ್ದೆ. ಆದರೆ 20 ತಿಂಗಳ ನಂತರ ನನಗೆ ಅಧಿಕಾರ ಬಿಟ್ಟುಕೊಡುವ ವೇಳೆ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರು ಖಾಸಗಿ ಹೋಟೆಲ್ಗೆ ಬಂದು ಷರತ್ತು ಹಾಕಿದರು.
ಮೈತ್ರಿ ಸರ್ಕಾರ ರಚಿಸುವಾಗಲೇ ಇಬ್ಬರ ನಡುವೆ ತಲಾ 20 ತಿಂಗಳ ಅಧಿಕಾರ ಹಂಚಿಕೆಯಾಗಿತ್ತು. ಯಾರ್ಯಾರಿಗೆ ಯಾವ ಯಾವ ಖಾತೆ ಎಂದೂ ಕೂಡ ತೀರ್ಮಾನವಾಗಿತ್ತು. ಅವಕಾಶ ತಪ್ಪಿಸುವ ಸಲುವಾಗಿಯೇ ಕುಮಾರಸ್ವಾಮಿ ದೇವೇಗೌಡರು ಷರತ್ತು ಹಾಕಿದ್ದರು ಎಂದು ಆರೋಪಿಸಿದರು.
ಪದೇ ಪದೇ ಯಡಿಯೂರಪ್ಪನವರು ನಂಬಿಕೆ ದ್ರೋಹ ಪದ ಬಳಸಿದ್ದರಿಂದ ಸುಸ್ತಾದ ಸಿಎಂ ನನ್ನ ರಕ್ತದ ಗುಣದ ಬಗ್ಗೆ ಮಾತನಾಡುತ್ತೀರ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ನನಗೆ ದುರದ್ದೇಶವಿದ್ದರೆ ನಿಮಗೆ ಸಚಿವ ಸ್ಥಾನ ನೀಡಿ ಬಿಜೆಪಿಯಿಂದ ಹೊರ ಕಳುಹಿಸಬಿಡಬಹುದಾಗಿತ್ತು. ಎಲುಬಿಲ್ಲದ ನಾಲಿಗೆ ಎಂದು ಬಾಯಿಗೆ ಬಂದಂತೆ ಮಾತನಾಡಬೇಡಿ. ನನಗೂ ನಿಮ್ಮ ಹಾಗೆ ಏರಿದ ಧ್ವನಿಯಲ್ಲಿ ಮಾತನಾಡುವುದು ಗೊತ್ತು. ಹೇಳುತ್ತಾ ಹೋದರೆ ಎಲ್ಲವೂ ಹೇಳಲು ಗೊತ್ತಿದೆ. ನಿಮ್ಮ ಮಿತಿಯಲ್ಲಿ ನೀವು ಎಷ್ಟು ಬೇಕೋ ಅಷ್ಟು ಮಾತನಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಈ ಹಂತದಲ್ಲಿ ಇಬ್ಬರ ನಡುವೆ ಏರು ದ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಅದಕ್ಕೆ ತಕ್ಕಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪರಸ್ಪರ ವಾಗ್ವಾದಕ್ಕೆ ಇಳಿದರು. ರೇಣುಕಾಚಾರ್ಯ ಅರವಿಂದ ಲಿಂಬಾಳಿ ಸೇರಿದಂತೆ ಅನೇಕ ಬಿಜೆಪಿ ಶಾಸಕರು ಯಡ್ಡಿ ಬೆಂಬಲಕ್ಕೆ ನಿಂತರೆ, ಸಚಿವರಾದ ಬಂಡೆಪ್ಪ ಕಾಶ್ಯಂಪೂರ್, ಎಸ್.ಆರ್.ಶ್ರೀನಿವಾಸ್,ಪ್ರಯಾಂಕ್ ಖರ್ಗೆ, ಶಾಸಕರಾದ ವಿನೋದ್ ಗೌಡ, ಅಜಯ್ ಸಿಂಗ್ ಅನೇಕರು ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಂತರು.
ಪದೇ ಪದೇ ಎದ್ದು ನಿಲ್ಲುತ್ತಿದ್ದ ರೇಣುಕಾಚಾರ್ಯರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸುಮ್ಮನೆ ಕೂತ್ಕೊಳ್ರಿ ಎಂದು ಹೇಳಿದಾಗ ಅವರಿಬ್ಬರ ನಡುವೆ ಒಂದು ಸುತ್ತಿನ ಮಾತಿನ ಚಕಮಕಿ ನಡೆಯಿತು. ಇದಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ, ಜೆಡಿಎಸ್ ಸರ್ಕಾರ ರಚನೆಯಾಗುವ ಮುನ್ನ ನಾನು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್ ಅವರ ªಮನೆಗೆ ತೆರಳಿ ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿದ್ದೆ. ಆದರೆ ಅವರು ತಾವು ದೇವೇಗೌಡರ ಜೊತೆ ಇರುವುದಾಗಿ ನನ್ನನ್ನು ಆಶೀರ್ವದಿಸಿ ಕಳುಹಿಸಿದರು. ಸಿಎಂ ಆದ ನಂತರ ಧರ್ಮಸಿಂಗ್ ಅವರ ಮನೆಗೆ ಹೋಗಿದ್ದೆ. ಅವರು ನನ್ನನ್ನು ತಮ್ಮ ಮಗನಂತೆ ಆರ್ಶಿರ್ವದಿಸಿ ಕಳುಹಿಸಿದ್ದರು. ಅವರು ಸಿಎಂ ಆಗಿ ಅಧಿಕಾರ ಕಳೆದುಕೊಂಡ 11 ವರ್ಷಗಳ ನಂತರ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೂ ಮತ್ತು ಅಧಿಕಾರಕ್ಕೂ ತಳುಕು ಹಾಕುವುದು ಸರಿಯಲ್ಲ. ಸಾವಿನಲ್ಲಿ ರಾಜಕಾರಣ ಮಾಡಬಾರದು ಎಂದು ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.
ಸಭಾಧ್ಯಕ್ಷ ರಮೇಶ್ಕುಮಾರ್ ಯಡಿಯೂರಪ್ಪ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ತಡೆಯುವುದಾಗಿ ರೂಲಿಂಗ್ ನೀಡಿದರು. ವಾಗ್ವಾದ ನಂತರ ಪ್ರತಿಕ್ರಿಯಿಸಿದ ರಮೇಶ್ಕುಮಾರ್ ರಾಜಕಾರಣದಲ್ಲಿ ಬಹಳಷ್ಟು ಘಟನೆಗಳು ನಡೆದಿರುತ್ತವೆ. ಅದನ್ನು ಪದೇ ಪದೇ ಪ್ರಸ್ತಾಪಿಸುವುದು ಸರಿಯಲ್ಲ. ವಯಸ್ಸಾದ ಕಾಲದಲ್ಲಿ ಉದ್ವೇಗಕ್ಕೆ ಒಳಗಾಗದೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಚರ್ಚೆ ಮಾಡಿ ಸದನದ ಸಮಯವನ್ನು ಸದುಪಯೋಗ ಮಾಡಲು ಅವಕಾಶ ಮಾಡಿಕೊಡಿ ಎಂದು ಆಡಳಿತ ಮತ್ತು ಪ್ರತಿಪಕ್ಷದ ಶಾಸಕರಲ್ಲಿಸಭಾಧ್ಯಕ್ಷರು ಮನವಿ ಮಾಡಿದರು.