ಅಸೆಂಬ್ಲಿಯಲ್ಲಿ ದುರ್ಯೋಧನನ ಚರ್ಚೆ

 

ಬೆಂಗಳೂರು, ಜು.9-ವಿಧಾನಸಭೆಯಲ್ಲಿ ಮಹಾಭಾರತದ ದುರ್ಯೋೀಧನ ಪಾತ್ರ ಕುರಿತು ಗಂಭೀರ ಚರ್ಚೆ ನಡೆಯಿತು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ ಸಂದರ್ಭದಲ್ಲಿ ಬಿಜೆಪಿ ಶಾಸಕ ವೀರಣ್ಣಚರಂತಿಮಠ್ ಅವರು, ಮುಖ್ಯಮಂತ್ರಿ ಉದ್ದೇಶಿಸಿ ನೀವು ದುರ್ಯೋಧನನ ಪಾತ್ರದ ವಿಷಯ ಪ್ರಸ್ತಾಪಿಸಿದ್ದೀರಿ ಎಂದು ನಾಂದಿ ಹಾಡಿದರು.
ಆಗ ಮಧ್ಯ ಪ್ರವೇಶಿಸಿದ ರಮೇಶ್‍ಕುಮಾರ್, ದುರ್ಯೋಧನನ ನಿಲುವು ಶ್ಲಾಘನೀಯ. ಸಂಕಷ್ಟದಲ್ಲಿದ್ದ ಕರ್ಣನ ವಿಚಾರದಲ್ಲಿ ತೆಗೆದುಕೊಂಡ ನಿಲುವನ್ನು ಶ್ಲಾಘಿಸಬೇಕು. ದ್ರೋಣಾಚಾರ್ಯರು ಕ್ಷತ್ರಿಯರಲ್ಲ ಎಂದಾಗ ಕರ್ಣನನ್ನು ಅಂಗರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದ್ದಾರೆ. ಮಹಾಭಾರತ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅರ್ಹತೆ ಇದ್ದವರು ಜಾತಿ ರಾಜಕಾರಣಕ್ಕಾಗಿ ವಂಚಿತರಾಗಬಾರದು ಎಂಬ ಸಂದೇಶವಿದೆ. ಆದರೆ, ದೌಪದಿಯ ವಸ್ತ್ರಾಪಹರಣ ವಿಚಾರದಲ್ಲಿ ದುರ್ಯೋಧನ ವಿಲನ್, ಆ ವಿಚಾರದಲ್ಲಿ ಈಗ ಚರ್ಚೆ ಬೇಡ. ಹೊರಗೆ ಚರ್ಚೆ ಮಾಡೊಣ ಎಂದಾಗ. ಕಾಂಗ್ರೆಸ್ ಶಾಸಕ ಮುನಿರತ್ನ ಮಾತನಾಡಿ, ತಾವು ಮಾಡುತ್ತಿರುವ ಸಿನಿಮಾ ಕಥೆಯನ್ನು ಸದನದಲ್ಲಿ ಹೇಳಿದ್ದೀರಿ ಎಂದರು.
ಆಗ ಮಾತು ಮುಂದುವರೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಮ್ಮ ಸಿನಿಮಾಕ್ಕೆ ಒಳ್ಳೆ ಪ್ರಚಾರ ಸಿಗುತ್ತೆ ಬಿಡಿ ಎಂದು ಆ ವಿಚಾರದ ಚರ್ಚೆಗೆ ತೆರೆ ಎಳೆದರು.
ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದಾಗ ಐದು ವರ್ಷಗಳಲ್ಲಿ ಲೂಟಿ ಮಾಡಿದ್ದಾರೆ. ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಯಡಿಯೂರಪ್ಪ ಟೀಕೆ ಮಾಡಿದ್ದರು ಎಂಬುದನ್ನು ಸಿಎಂ ಉಲ್ಲೇಖಿಸಿದ್ದರು.
ತಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದರು. ಈಗ ಯಡಿಯೂರಪ್ಪ ಅವರ ಬಗ್ಗೆ ಅನುಕಂಪದಿಂದ ಮಾತನಾಡುತ್ತಾರೆ ಎಂದರು.
ಈ ನಡುವೆ ಮಾತನಾಡಲು ಎದ್ದು ನಿಂತ ಬಸವರಾಜಬೊಮ್ಮಾಯಿ ಅವರನ್ನು ಉದ್ದೇಶಿಸಿ, ಬೊಮ್ಮಾಯಿ ಅವರೇ ನೈಸ್ ಕಂಪೆನಿ ಅಗ್ರಿಮೆಂಟ್ ರದ್ದತಿ ವಿಚಾರವನ್ನು ಸಂಪುಟ ಸಭೆಗೆ ತಂದಾಗ ಸಂಜೆ ವರೆಗೂ ಸಂಪುಟ ಸಭೆಗೆ ಬರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಆಗ ವಿರೋಧ ಪಕ್ಷದ ಶಾಸಕರು ಈಗ ನೈಸ್ ಕಂಪೆನಿ ಮಾಲೀಕರು ನಿಮ್ಮೊಂದಿಗೆ ಇದ್ದಾರೆ ಎಂದಾಗ, ಆಗ ಆಡಳಿತ ಪಕ್ಷದ ಹಲವು ಶಾಸಕರು ಅವರನ್ನು ಜನ ಮನೆಗೆ ಕಳುಹಿಸಿದ್ದಾರೆ. ಬೇಕಾದರೆ ನೀವೇ ಕರೆದುಕೊಳ್ಳಿ ಎಂದು ತಿರುಗೇಟು ನೀಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಸವರಾಜಬೊಮ್ಮಾಯಿ ಮಾತನಾಡಿ, ನೈಸ್ ರಸ್ತೆಗೆ ಸಂಬಂಧಿಸಿದ ಸದನ ಸಮಿತಿ ವರದಿ ಇದೆ. ಈಗ ಆ ವಿಷಯ ಸಂಪುಟ ಸಭೆಗೆ ತರಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಆಗ ಮುಖ್ಯಮಂತ್ರಿ ಸ್ವಲ್ಪ ಸಮಾಯವಕಾಶ ಕೊಡಿ ಎಂದಾಗ ಮತ್ತೆ ಮಾತು ಮುಂದುವರೆಸಿದ ಬೊಮ್ಮಾಯಿ, ನೈಸ್‍ಗೆ ಸಮಯಾವಕಾಶ ಬೇಕೇ ಬೇಕು ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಆರ್.ವಿ.ದೇಶಪಾಂಡೆ, ಇತಿಹಾಸ ಮರುಕಳಿಸಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಮಿತ್ರರಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಡೆದುಕೊಳ್ಳಲಾಗುತ್ತದೆ. ಸಂಸಾರದ ರಹಸ್ಯವನ್ನು ಹೇಳಬಾರದು ಎಂದು ಚರ್ಚೆಗೆ ತೆರೆ ಎಳೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ