ಮೈಸೂರು, ಜು.8-ನಗರ ಸಮೀಪದಲ್ಲಿರುವ ಪ್ರತಿಷ್ಠಿತ ದೇವಾಲಯವಾದ ಚಾಮುಂಡೇಶ್ವರಿ ದೇವಸ್ಥಾನದ ನೌಕರರು ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಸರ್ಕಾರಿ ವೇತನ ಶ್ರೇಣಿಗೆ ಆಗ್ರಹಿಸಿ ದೇವಸ್ಥಾನದ ಚಾಮುಂಡೇಶ್ವರಿ ಅಮ್ಮನವರ ಸಮೂಹ ದೇವಸ್ಥಾನಗಳ ನೌಕರರ ಸಂಘಟನೆ ಸದಸ್ಯರು ಸಭೆ ನಡೆಸಿ ಸರ್ಕಾರಿ ವೇತನ ಶ್ರೇಣಿಗೆ ಒತ್ತಾಯಿಸಿದ್ದಾರೆ. ಸರ್ಕಾರ ಈ ಕೂಡಲೇ ಕ್ರಮಕೈಗೊಳ್ಳದಿದ್ದರೆ ಆಷಾಢ ಶುಕ್ರವಾರ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಕಾರ್ಯಕ್ರಮದಲ್ಲಿ ದೂರ ಉಳಿಯುವುದಾಗಿ ಎಚ್ಚರಿಸಿದ್ದಾರೆ. ಚಾಮುಂಡೇಶ್ವರಿ ಹಾಗೂ ಸಮೂಹ ದೇವಸ್ಥಾನಗಳಲ್ಲಿ 160 ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 80 ಮಂದಿಗೆ ಮಾತ್ರ 5ನೇ ವೇತನ ಆಯೋಗ ಶ್ರೇಣಿ ದೊರಕುತ್ತಿದೆ. ಉಳಿದ 80 ಮಂದಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಾಗಾಗಿ ಸರ್ಕಾರ ಈ ಕೂಡಲೇ ಕ್ರಮಕೈಗೊಂಡು ಎಲ್ಲಾ ಸಿಬ್ಬಂದಿಗೂ 5ನೇ ವೇತನ ಶ್ರೇಣಿಯನ್ನು ದೊರಕಿಸಿಕೊಂಡುವಂತೆ ಒತ್ತಾಯಿಸಿದ್ದಾರೆ.