ವಾಷಿಂಗ್ಟನ್/ಹೈದರಾಬಾದ್: ಅಮೆರಿಕದ ಕನ್ಸಾಸ್ ನಗರದ ರೆಸ್ಟೊರೆಂಟ್ವೊಂದರಲ್ಲಿ ತೆಲಂಗಾಣದ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ದರೋಡೆ ಮಾಡುವ ಪ್ರಯತ್ನದಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಿರುವ ಪೊಲೀಸರು, ಆರೋಪಿಯ ಹುಡುಕಾಟ ನಡೆಸಿದ್ದಾರೆ.
ಮಿಸೌರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ 26 ವರ್ಷ ವಯೋಮಾನದ ಶರತ್ ಕೊಪ್ಪು, ಜೇಸ್ ಫಿಷ್ ಆ್ಯಂಡ್ ಚಿಕನ್ ಮಾರ್ಕೆಟ್ ರೆಸ್ಟೊರೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಶರತ್ ಈ ವರ್ಷದ ಪ್ರಾರಂಭದಲ್ಲಷ್ಟೇ ಅಮೆರಿಕಕ್ಕೆ ತೆರಳಿದ್ದರು.
ಎಂದಿನಂತೆ ಶುಕ್ರವಾರವೂ ರೆಸ್ಟೊರೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ರಾತ್ರಿ 7 ಗಂಟೆ(ಸ್ಥಳೀಯ ಕಾಲಮಾನ) ಸುಮಾರಿಗೆ ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಕ್ತದ ಮಡುವಿನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆ ಹೊತ್ತಿಗಾಗಲೇ ಶರತ್ ಮೃತಪಟ್ಟಿದ್ದರು.
ಎನ್ಡಿಟಿವಿ ವರದಿ ಪ್ರಕಾರ, ಶಂಕಿತ ದರೋಡೆಕೋರ ಶುಕ್ರವಾರ ಸಂಜೆ ರೆಸ್ಟೊರೆಂಟ್ಗೆ ಬಂದಾಗ ಅಲ್ಲಿ ಐದು ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಗ್ರಾಹಕರೊಬ್ಬರನ್ನು ತಳ್ಳಿದ ದರೋಡೆಕೋರ ಗನ್ ಹೊರತೆಗೆದ. ಸುತ್ತಲಿನ ಎಲ್ಲರೂ ಇದ್ದಲ್ಲಿಯೇ ಅವಿತು ಕುಳಿತುಕೊಳ್ಳುವ ಪ್ರಯತ್ನದಲ್ಲಿದ್ದರು, ಶರತ ಮಾತ್ರ ದರೋಡೆಕೋರನ ವಿರುದ್ಧ ದಿಕ್ಕಿನಲ್ಲಿ ಓಡುತ್ತಿದ್ದರು. ಗನ್ನಿಂದ ಸಿಡಿಸಿದ ಗುಂಡು ನೇರ ಶರತ್ ಬೆನ್ನೆಗೆ ತಲುಗಿ ಕೆಲಕ್ಕುರುಳಿದರು. ಸಿಸಿಟಿವಿಯಲ್ಲಿ ಈ ದುರ್ಘಟನೆಯ ದೃಶ್ಯಗಳು ಸೆರೆಯಾಗಿವೆ.
‘ಗನ್ ತೆಗೆಯುತ್ತಿದ್ದಂತೆ ನಾವು ಹಾಗೂ ಅಲ್ಲಿದ್ದ ಮೂವರು ಗ್ರಾಹಕರು ಅವಿತುಕುಳಿತೆವು. ಮೂರು–ನಾಲ್ಕು ಸುತ್ತು ಗುಂಡು ಹಾರಿಸಿದ್ದು ಕೇಳಿಸಿತು. ಶರತ್ ಹಿಂಬದಿಗೆ ಗುಂಡು ತಗುಲಿತ್ತು. ತಕ್ಷಣವೇ ಆ ಶಸ್ತ್ರಧಾರಿ ಅಲ್ಲಿಂದ ಪರಾರಿಯಾದ, ನಾವು 911ಗೆ ಕರೆ ಮಾಡಿದೆವು’ ಎಂದು ರೆಸ್ಟೊರೆಂಟ್ ಉದ್ಯೋಗಿ ಘಟನೆಯನ್ನು ವಿವರಿಸಿದ್ದಾರೆ.
ಪೊಲೀಸರು ಶನಿವಾರ, ಶಂಕಿತ ಹಂತಕನ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕಂದು ಮತ್ತು ಬಿಳಿ ಪಟ್ಟಿಯ ಶರ್ಟ್ ಧರಿಸಿರುವುದನ್ನು ಗುರುತಿಸಬಹುದಾಗಿದೆ. ಈತನ ಬಗ್ಗೆ ಸುಳಿವು ದೊರೆತವರು ಕೂಡಲೇ 816-234-5043 ಅಥವಾ 816-474-8477 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದು, ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್ ಬಹುಮಾನ ಘೋಷಿಸಿದ್ದಾರೆ.
ಸದಾ ಉತ್ಸಾಹದಿಂದ ಇರುತ್ತಿದ್ದ, ಬೇರೆಯವರಿಗೆ ಸಹಾಯ ಹಸ್ತ ನೀಡುತ್ತಿದ್ದ’ ಎಂದು ಶರತ್ನನ್ನು ರೆಸ್ಟೊರೆಂಟ್ ಸಿಬ್ಬಂದಿ ನೆನಪಿಸಿಕೊಳ್ಳುತ್ತಾರೆ.
ತೆಲಂಗಾಣದ ವಾರಂಗಲ್ನಲ್ಲಿ ಬೆಳೆದ ಶರತ್, ವಾಸವಿ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದರು. ಹೈದರಾಬಾದ್ನಲ್ಲಿ ಸಾಫ್ಟ್ವೇರ್ ಉದ್ಯೋಗಿ ಆಗಿದ್ದ ಅವರು ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ಬಂದಿದ್ದರು.
ಶನಿವಾರ ಶರತ್ ಕುಟುಂಬಕ್ಕೆ ವಿಷಯ ತಲುಪಿದ್ದು, ಮೃತ ದೇಹವನ್ನು ತರುವ ಪ್ರಯತ್ನದಲ್ಲಿದ್ದಾರೆ. ಚಿಕಾಗೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಶರತ್ನ ಸೋದರ ಸಂಬಂಧಿ ಎನ್ನಲಾಗುತ್ತಿರುವ ರಘು ಚೌದವರ್ಮನ್, ವಾರಂಗಲ್ನಲ್ಲಿರುವ ಶರತ್ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಭಾನುವಾರದ ಹೊತ್ತಿಗೆ 45 ಸಾವಿರ ಡಾಲರ್ನಷ್ಟು ಹಣ ಸಂಗ್ರಹವಾಗಿದೆ.
ದೊಡ್ಡ ಕನಸುಗಳನ್ನು ಹೊತ್ತಿದ್ದ ಉತ್ಸಾಹಿ ಎಂಜಿನಿಯರ್, ಅಥ್ಲೀಟ್, ಹಾಸ್ಯಗಾರನನ್ನು ಸ್ನೇಹಿತರು ನೆನಪಿಸಿಕೊಳ್ಳುತ್ತಿದ್ದಾರೆ.
ಒಂದು ವರ್ಷದ ಹಿಂದೆ ಇದೇ ಕನ್ಸಾಸ್ ನಗರದಲ್ಲಿ ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಛಿಭೋಟ್ಲ(32) ಅವರನ್ನು ಜನಾಂಗೀಯ ದ್ವೇಷದಿಂದ ಬಾರ್ವೊಂದರಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಅಮೆರಿಕದ ನೌಕಾ ಪಡೆಯಲ್ಲಿದ್ದ ಆ್ಯಡಮ್ ಡಬ್ಲ್ಯು ಪುರಿಂಟೊ 2017ರ ಫೆಬ್ರುವರಿ 22ರಂದು ಶ್ರೀನಿವಾಸ್ ಮೇಲೆ ಗುಂಡು ಹಾರಿಸಿ, ‘ನನ್ನ ದೇಶ ಬಿಟ್ಟು ತೊಲಗು’ ಎಂದು ಅರಚಾಡಿದ್ದ. ಈ ಮೇ ನಲ್ಲಿ ಆತನಿಗೆ ಅಲ್ಲಿನ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.