ಸೋಚಿ, ಜು.8-ಭಾರೀ ನಿರೀಕ್ಷೆ ಮೂಡಿಸಿ ಸೆಮಿಫೈನಲ್ ತಲುಪುವ ಆಸೆ ಹೊತ್ತಿದ್ದ ರಷ್ಯಾದ ಅದೃಷ್ಟ ಕೈತಪ್ಪಿದೆ. ನಿರೀಕ್ಷೆ ಮೀರಿದ ಪ್ರದರ್ಶನ ನೀಡಿ ಕ್ರೊವೇಷಿಯಾ ವಿಶ್ವ ಕಪ್ ಗೆಲ್ಲುವ ಕನಸು ಹೊತ್ತು ಮುನ್ನುಗ್ಗಿದೆ.
ಇಲ್ಲಿ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಆಕ್ರಮಣಕಾರಿ ಪ್ರದರ್ಶನ ನೀಡಿ ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಪಂದ್ಯದ 31ನೇ ನಿಮಿಷದಲ್ಲಿ ರಷ್ಯಾದ ಮುಂಚೂಣಿ ಆಟಗಾರ ಚೆರಿಶೌವ್ ಗೋಲ್ ಬಾರಿಸುವ ಮೂಲಕ ಖಾತೆ ತೆರೆದರು. ಇದಾದ 8 ನಿಮಿಷಕ್ಕೆ ಕ್ರೊವೇಷಿಯಾದ ಮಂಡ್ಲುಕಿಕ್ ಚೆಂಡನ್ನು ಆಕರ್ಷಕ ರೀತಿಯಲ್ಲಿ ಗೋಲ್‍ಪಟ್ಟಿಯೊಳಗೆ ಸೇರಿಸುವ ಮೂಲಕ ತಂಡಕ್ಕೆ ಭರ್ಜರಿ ಹುಮ್ಮಸ್ಸು ತಂದುಕೊಟ್ಟರು.
ಮಧ್ಯಂತರದ ವೇಳೆಗೆ ಉಭಯ ತಂಡಗಳು 1-1 ಗೋಲ್‍ಗಳ ಸಮಬಲದಿಂದ ಪ್ರೇಕ್ಷಕರ ಕುತೂಹಲ ಇಮ್ಮಡಿಗೊಂಡಿತು. ನಂತರ ನಡೆದ ಚಾಣಾಕ್ಷ ಹಾಗೂ ಮೈಂಡ್ ಗೇಮ್‍ನಲ್ಲಿ ಉಭಯ ತಂಡಗಳು ನಿಗದಿತ 90 ನಿಮಿಷಗಳ ಅವಧಿಯಲ್ಲಿ ಯಾವುದೇ ಗೋಲ್ ಬಾರಿಸಲಿಲ್ಲ. ನಂತರ ರೆಫರ್ರಿ 20 ನಿಮಿಷಗಳ ಹೆಚ್ಚುವರಿ ಸಮಯ ನೀಡಿ ನಿರ್ಣಾಯಕ ಫಲಿತಾಂಶಕ್ಕೆ ಎದುರು ನೋಡುತ್ತಿದ್ದರು.
ಈ ವೇಳೆ ಕ್ರೊವೇಷಿಯಾದ ಆಟಗಾರರ ತಂತ್ರಗಾರಿಕೆ ಯಶಸ್ವಿಯಾಯಿತು. 100ನೆ ನಿಮಿಷದಲ್ಲಿ ಡೀ ವಿಡಾ ರಷ್ಯಾದ ಡಿಫೆನ್ಸ್ ಆಟಗಾರರನ್ನು ದಾಟಿ ಆಕರ್ಷಕ ಗೋಲ್ ಬಾರಿಸುವ ಮೂಲಕ ಫುಟ್ಬಾಲ್ ಪ್ರೇಮಿಗಳಲ್ಲಿ ಮಿಂಚಿನ ಸಂಚಾರ ಸೃಷ್ಟಿಸಿದರು. ಇನ್ನೇನು ಅತಿಥೇಯ ರಷ್ಯಾ ಸೋಲು ಖಚಿತ ಎಂಬುವಷ್ಟರಲ್ಲಿ ಹಿರಿಯ ಆಟಗಾರ ಫರ್ನಾಂಡೀಸ್ ಆಪತ್ಭಾಂದವರಾಗಿ ಕೊನೆಯ ಘಳಿಗೆಯಲ್ಲಿ (115ನಿಮಿಷ) ಗೋಲ್ ಹೊಡೆಯುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು.
ಪಂದ್ಯದ ಪೂರ್ಣ ಸಮಯ ಮುಗಿದ ನಂತರ 2-2 ಸಮಾಂತರದಲ್ಲಿ ಉಭಯ ತಂಡಗಳು ಅಂಕಣದಿಂದ ಹೊರಬಂದರು. ಸ್ವಲ್ಪ ಸಮಯದ ನಂತರ ಪೆನಾಲ್ಟಿ ಶೂಟೌಟ್‍ಗೆ ಆದೇಶ ಬಂದ ಹಿನ್ನೆಲೆಯಲ್ಲಿ ಆಟಗಾರರು ಸೇರಿದಂತೆ ನೆರೆದಿದ್ದ ಅಭಿಮಾನಿಗಳಲ್ಲಿ ಎದೆಬಡಿತ ದ್ವಿಗುಣಗೊಂಡಿತು.
ರಷ್ಯಾ ಹಾಗೂ ಕ್ರೊವೇಷಿಯಾದ ಗೋಲ್‍ಕೀಪರ್‍ಗಳು ಹೀರೋಗಳಾಗುವ ಅವಕಾಶ ಎದುರಾಯಿತು. ಈ ನಡುವೆ ಉಭಯ ತಂಡಗಳು ಮೊದಲ ಅವಕಾಶದಲ್ಲಿ ಗೋಲ್ ಬಾರಿಸಿತು. ಎರಡನೇ ಅವಕಾಶದಲ್ಲಿ ರಷ್ಯಾ ಆಟಗಾರ ಗುರಿ ತಪ್ಪಿದ ಪರಿಣಾಮ ಕ್ರೊವೇಷಿಯಾ ಮುನ್ನಡೆ ಕಾಯ್ದುಕೊಂಡಿತು. ಆದರೆ ಅಂತಿಮವಾಗಿ 3 ಶೂಟೌಟ್‍ನಲ್ಲಿ ಗುರಿ ಮುಟ್ಟಿದ ಕ್ರೊವೇಷಿಯಾ ದಿಗ್ವಿಜಯ ಸಾಧಿಸಿದಂತೆ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು.
ಕೊನೆಯ ಘಳಿಗೆಯಲ್ಲಿ ಮೈ ಮರೆತ ರಷ್ಯಾ ಆಟಗಾರರು ಭಾರೀ ಬೆಲೆ ತೆತ್ತಬೇಕಾಯಿತು. ಇದೇ ಮೊದಲ ಬಾರಿಗೆ ಕ್ರೊವೇಷಿಯಾ ಸೆಮಿ ಫೈನಲ್ ತಲುಪುತ್ತಿದ್ದು, ಫುಟ್ಬಾಲ್ ಪಂಡಿತರ ಹುಬ್ಬೇರುವಂತೆ ಮಾಡಿದೆ.