ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆಯಾಗಿ ಇಂದಿಗೆ 2 ವರ್ಷಗಳಾಗಿರುವ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಸಲುವಾಗಿ ಶ್ರೀನಗರ ಸೇರಿ ಹಲವೆಡೆ ನಿರ್ಬಂಧ ಹೇರಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ.
2016ಜು.8 ರಂದು ಸೇನಾಪಡೆಗಳ ಕಾರ್ಯಾಚರಣೆ ವೇಳೆ ಬುರ್ಹಾನ್ ವಾನಿ ಹತ್ಯೆಯಾಗಿದ್ದ. ಅಂದಿನಿಂದ ಇಂದಿನವರೆಗೂ ಕಾಶ್ಮೀರದಲ್ಲಿ ಪ್ರಕ್ಷುಬ್ದತೆ ಮುಂದುವರಿದಿದೆ.
ಈ ನಡುವೆ ಹಿರಿಯ ಪ್ರತ್ಯೇಕತಾವಾದಿ ನಾಯಕರುಗಳಾದ ಸೈಯದ್ದ ಅಲಿ ಗಿಲಾನಿ ಮತ್ತು ಮಿರ್ವೈಜ್ ಉಮರ್ ಫರೀಕ್ ಅವರನ್ನು ಗೃಹ ಬಂಧನದಲ್ಲಿರಸಲಾಗಿದ್ದು, ಮೊಹಮ್ಮದ್ ಯಾಸಿನ್ ಮಲಿಕ್ ಅವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ನೌಹಟ್ಟಾ, ಖನ್ಯಾರ್, ರೈನಾವಾರಿ, ಎಂ.ಆರ್. ಗಂಜ್ ಮತ್ತು ಶ್ರೀನಗರ ಹಳೇ ನಗರ ಸಫಾ ಕದಲ್ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದೆದ ಹಲವೆಡೆ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದಲ್ಲದೆ, ತ್ರಾಲ್ ನಲ್ಲಿಯೂ ಎರಡು ದಿನಗಳ ಕಾಲ ನಿರ್ಬಂಧ ಹೇರಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಶ್ರೀನಗರ ಸೂಕ್ಷ್ಮ ಪ್ರದೇಶಗಳು, ಜಿಲ್ಲಾ ಪ್ರಧಾನ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ, ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸೇವೆ ಹಾಗೂ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.