ವಾಷಿಂಗ್ಟನ್, ಜು.8- ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಮುಸೂರಿ ರಾಜ್ಯದ ಕನಸಸ್ ನಗರದಲ್ಲಿ ನಡೆದಿದೆ. ಮುಸೂರಿ ಕನಸಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದ ಶರತ್ ಕೊಪ್ಪು (25) ಮೃತ ವಿದ್ಯಾರ್ಥಿಯಾಗಿದ್ದು, ಭಾರತದ ಆಂಧ್ರಪ್ರದೇಶದ ಮೂಲದವನೆಂದು ತಿಳಿದು ಬಂದಿದೆ. ಕಳೆದ ಶುಕ್ರವಾರ ಜೆ ಫಿಶ್ ಅಂಡ್ ಚಿಕನ್ ಮಾರುಕಟ್ಟೆ ಬಳಿ ದುಷ್ಕರ್ಮಿಗಳು ಆತನ ಬಳಿ ಇರುವ ವಸ್ತುಗಳನ್ನು ದೋಚುವ ಸಂದರ್ಭದಲ್ಲಿ ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಈ ಮಾರುಕಟ್ಟೆ ಪ್ರದೇಶದಲ್ಲಿ ಶರತ್ ಅರೆಕಾಲಿಕ ಉದ್ಯೋಗಿಯಾಗಿದ್ದ ಎಂದು ಕೂಡ ಹೇಳಲಾಗುತ್ತಿದೆ. ಕಳೆದ ಜನವರಿಯಲ್ಲಿ ಈತ ಎಂಎಸ್ ಕಲಿಕೆಗಾಗಿ ಅಮೆರಿಕಕ್ಕೆ ಬಂದಿದ್ದರು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಕೊಲೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಮತ್ತು ಇವರ ಕುಟುಂಬಕ್ಕೂ ಮಾಹಿತಿ ತಿಳಿಸಿದ್ದೇವೆ ಎಂದು ಚಿಕಾಗೋನಲ್ಲಿರುವ ಭಾರತೀಯ ರಾಯಭಾರಿಗೂ ಘಟನೆಯ ಬಗ್ಗೆ ವಿವರಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕೊಲೆಗಾರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್ ಬಹುಮಾನ ಘೋಷಿಸಲಾಗಿದ್ದು, ಮಾರುಕಟ್ಟೆಯ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ತಿರುಗಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ. ಭಾರತಕ್ಕೆ ಮೃತ ದೇಹವನ್ನು ಕಳುಹಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.