ಬೆಂಗಳೂರು,ಜು.8- ಸರದಾರ್ ವಲ್ಲಭಾಯ್ ಪಟೇಲ್ ಅವರು ದೇಶಕ್ಕೆ ಅಗಾಧವಾದ ಕೊಡುಗೆ ನೀಡಿದ್ದು, ಹೃದಯ ಶ್ರೀಮಂತಿಕೆಯ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು ಎಂದು ಅಂಕಣಕಾರ ಡಾ.ಗುರುರಾಜ್ ಕರಜಗಿ ಹೇಳಿದರು.
ವಿದ್ಯಾಶ್ರೀ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಲೇಖಕ ನಾ.ಸು.ಮನ್ನಾರ್ ಕೃಷ್ಣರಾವ್ ಅವರ ವಿರಚಿತ ಭಾರತ ಒಕ್ಕೂಟ ನಿರ್ಮಾಪಕ ಉಕ್ಕಿನ ಮನುಷ್ಯ ಸರದಾರ್ ವಲ್ಲಭಾಯ್ ಪಟೇಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಹಿತಕ್ಕಾಗಿ ದುಡಿದ ಅವರು ಏನೇ ಪರಿಸ್ಥಿತಿ ಬಂದರೂ ಧೃತಿಗೆಡದೆ ದೇಶಕ್ಕಾಗಿ ಹೋರಾಟ ನಡೆಸಿದರು. ಅಖಂಡ ಭಾರತ ನಿರ್ಮಾಣ ಮಾಡುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಇಂಥ ಮಹಾನ್ ವ್ಯಕ್ತಿಯ ಬಗ್ಗೆ ತಿಳಿಯಬೇಕಾದರೆ ಈ ಪುಸ್ತಕ ಓದಬೇಕು ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಪುಸ್ತಕಗಳು ಬಿಡುಗಡೆಗೊಳ್ಳಬೇಕು ಎಂದರು.
ಸ್ವತಂತ್ರಪೂರ್ವದಲ್ಲಿ ಅಂದಿನ ಜನರು ಸರ್ದಾರ್ ಎಂಬ ಬಿರುದನ್ನು ನೀಡಿದ್ದಾರೆ. ಸ್ವತಂತ್ರಕ್ಕಾಗಿ ಹಲವಾರು ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹ ಮಹಾನ್ ಹೋರಾಟಗಾರರಿಗೆ ಸರ್ದಾರ್, ನೇತಾಜಿ, ಮಹಾತ್ಮ ಎಂಬ ಬಿರುದನ್ನು ಜನರೇ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಟಿ.ಎಸ್.ನಾಗಾಭರಣ ಸೇರಿದಂತೆ ಮತ್ತಿತರರು ಇದ್ದರು.