ಜೈಪುರ, ಜು.8- ಅರಮನೆಗಳ ನಗರಿ ಎಂದೇ ಬಿಂಬಿಸಿಕೊಂಡಿರುವ ಜೈಪುರದಲ್ಲಿ ಇಂದು ಭೂಮಿ ಕಂಪಿಸಿದ್ದು ಜನರು ಭಯಭೀತರಾಗಿದ್ದಾರೆ. ಇಂದು ಬೆಳಗ್ಗೆ 9.43ರ ಸುಮಾರಿನಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆಯು 4.3ರಷ್ಟಿದ್ದು ಕಂಪನವು 10 ಕಿಲೋಮೀಟರ್ ಆಳದವರೆಗೂ ವ್ಯಾಪಿಸಿದೆ ಎಂದು ತಿಳಿದುಬಂದಿದೆ. ಭೂ ಕಂಪನವು ಜೈಪುರ ನಗರದಿಂದ 50 ಕಿಲೋಮೀಟರ್ ಉತ್ತರದವರೆಗೆ ಹರಡಿದ್ದು, ಮನೋಹರ್‍ಪಾಲ್ ಟೋಲ್ ಪ್ಲಾಜಾ, ಎನ್‍ಎಚ್-48, ಡೆಲ್ಲಿ- ಜೈಪುರ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಭೂಕಂಪನದ ಅನುಭವ ಉಂಟಾಗಿದೆ. ಭೂಕಂಪನವು ಬೆಳಗ್ಗೆ ಸಂಭವಿಸಿದ್ದರಿಂದ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಇಂದು ಸಂಭವಿಸಿದ ಭೂಕಂಪನದಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.