
ಮಂಗಳೂರು: ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನ್ನಾಡುತ್ತಿದ್ದ ಅವರು ಮೈತ್ರಿ ಸರಕಾರದಲ್ಲಿ ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದ್ದು ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದ್ದಾರೆ.
ಸಮಿಶ್ರ ಸರಕಾರ ಯಾವಾಗ ಬಿದ್ದು ಹೋಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲ .ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಈ ಸರಕಾರ ಹೆಚ್ಚು ಬಾಳುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಇಷ್ಟು ಮಳೆಯಾಗುತ್ತಿದ್ದರು ಕೂಡ ಇನ್ನೂ ಸರಕಾರ ಸಭೆ ನಡೆಸಿಲ್ಲ. ಯಾವುದೇ ಪರಿಹಾರ ನೀಡಿಲ್ಲ. ಜನರು ನೀರಿನಲ್ಲಿ ಮುಳುಗುತಿದ್ದಾರೆ. ಆದರೂ ಇವರಿಗೆ ಕ್ಯಾರೇ ಇಲ್ಲ. ಇವರಿಗೆ ತಾವು ಕೂಡ ನಾಳೆ ಮುಳುಗಿ ಹೋಗುತ್ತೇವೆ ಎಂದು ಗೊತ್ತಿದೆ . ಅದಕ್ಕೆ ಇವರು ಚಿಂತಿಸುವುದು ಇಲ್ಲ, ಕೆಲಸ ಮಾಡುವುದೂ ಇಲ್ಲ, ಎಂದು ಹೇಳಿದರು.
ದೇಶದಲ್ಲಿ ತೃತೀಯ ರಂಗ ಹರಿದ ಬಟ್ಟೆಯ ಹಾಗೆ ಆಗಿದೆ. ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗುವುದಿಲ್ಲ. ಮಾಯಾವತಿ ಕಾಂಗ್ರೆಸ್ ಒಟ್ಟಿಗೆ ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು ಮೋದಿಯನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.