ಟಿ.ನರಸೀಪುರ, ಜು.8 – ಹೆಣ್ಣೆಂದು ತಾನು ಹೆತ್ತ ಮಗುವನ್ನೇ ತಾಯಿ ಕೆರೆಗೆ ಬಿಸಾಡಿರುವ ಹೃದಯ ವಿದ್ರಾವಕ ಘಟನೆ ಟಿ.ನರಸೀಪುರ ಸಮೀಪದ ಮಾರನಪುರದಲ್ಲಿ ನಡೆದಿದೆ. ಗ್ರಾಮದ ಪ್ರಭಾವತಿ ಎಂಬಾಕೆ 15 ದಿನಗಳ ಹೆಣ್ಣು ಹಸುಗೂಸನ್ನು ಕೆರೆಗೆ ಎಸೆದಿರುವ ತಾಯಿ.
ಈಕೆ ಮಾರನಪುರದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. 15 ದಿನಗಳ ಹಿಂದೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಈಕೆ ಹೆಣ್ಣು ಶಿಶುವಿಗೆ ಜನ್ಮನೀಡಿದ್ದಳು. ಅನಾರೋಗ್ಯದ ಕಾರಣ ಮಗುವನ್ನು ಐಸಿಯುನಲ್ಲಿಡಲಾಗಿತ್ತು. ಈಕೆ ಮಗುವನ್ನು ಅಲ್ಲೇ ಬಿಟ್ಟು ಊರಿಗೆ ಹಿಂತಿರುಗಿದ್ದಳು. ಗಂಡ ಹಾಗೂ ಊರಿನ ಜನ ಮಗು ಎಲ್ಲಿ ಎಂದು ಪ್ರಶ್ನಿಸಿದಾಗ ಹುಷಾರಿಲ್ಲ ಆಸ್ಪತ್ರೆಯಲ್ಲಿಯೇ ಇದೆ ಎಂದು ಹೇಳಿದ್ದಾಳೆ.
ನಂತರ ಚೆಲುವಾಂಬ ಆಸ್ಪತ್ರೆಯಿಂದ ಮಗುವನ್ನು ಊರಿಗೆ ತಂದಿದ್ದಾಳೆ. ಪತಿ ಮಹದೇವ ಕೆಲಸಕ್ಕೆ ಹೋದ ನಂತರ ಮಗುವನ್ನು ನದಿಯ ಬಳಿಗೆ ತಂದಿದ್ದಾಳೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುವವರು ಹಸುಗೂಸನ್ನು ಚಳಿಗಾಳಿಗೆ ಏಕೆ ತಂದಿದ್ದೀಯಾ ಎಂದು ಕೇಳಿದ್ದಾರೆ. ಅದಕ್ಕೆ ಮೃತಪಟ್ಟಿದೆ ಎಂದು ಹೇಳಿ ತಕ್ಷಣ ನದಿಗೆ ಎಸೆದು ಪರಾರಿಯಾಗಲು ಯತ್ನಿಸಿದ್ದಾಳೆ. ತಕ್ಷಣ ಊರಿನವರು ಅವಳನ್ನು ಹಿಡಿದು ಚೆನ್ನಾಗಿ ಬೈಯ್ದು, ನೀನು ಅಂಗನವಾಡಿಯಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಅರ್ಹಳಲ್ಲ. ನಿನ್ನ ಮಗುವನ್ನೇ ನದಿಗೆ ಎಸೆದಿದ್ದೀಯ. ನೀನು ಇಲ್ಲಿ ಇರಬೇಡ ಎಂದು ಬೆದರಿಸಿ ಮಗುವಿನ ಸಂಸ್ಕಾರವನ್ನು ಅವರೇ ನೆರವೇರಿಸಿದ್ದಾರೆ.