ಟೋಕಿಯೊ, ಜು.7- ಉದಯರವಿ ನಾಡು ಜಪಾನ್‍ನ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ತಲೆದೂರಿದ್ದು, ಕನಿಷ್ಠ 17 ಮಂದಿ ಮೃತಪಟ್ಟು, 53 ಜನರು ಕಣ್ಮರೆಯಾಗಿದ್ದಾರೆ.
ಈ ವಾರದಿಂದ ಹಿರೋಶಿಮಾ, ಎಹಿಮೆ, ಓಕಯಾಮಾ, ಯಮಗುಚಿ ಮತ್ತು ಕ್ಯಾಟೋ ಮುಖಜ ಭೂಮಿಗಳಲ್ಲಿ ಪ್ರಕೃತಿ ವಿಕೋಪದಿಂದ ಸಾವು-ನೋವು ಸಂಭವಿಸಿದ್ದು, ಕೆಲವರು ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ಭೋರ್ಗರೆತದಿಂದ ಅನೇಕ ಅಣೆಕಟ್ಟುಗಳು ಅಪಾಯಮಟ್ಟ ತಲುಪಿವೆ. ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೂಕುಸಿತದಿಂದ ರಸ್ತೆಗಳಿಗೆ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆ ಏರುಪೇರಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿವೆ.