ವಿಧವೆಯರ ಹಕ್ಕುಗಳ ರಕ್ಷಣೆಗೆ ಸರ್ಕಾರದ ವಿಶೇಷ ಗಮನ: ಸಾಮಾನ್ಯ ಕಾರ್ಯಾಚರಣಾ ಯೋಜನೆಯ ಅನುಷ್ಠಾನ ಪ್ರಕ್ರಿಯೆಗೆ ಚಾಲನೆ

Varta Mitra News

ಬೆಂಗಳೂರು: ವಿಧವೆಯರ ಹಕ್ಕುಗಳ ರಕ್ಷಣೆಯತ್ತ ವಿಶೇಷ ಗಮನಹರಿಸಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಸಾಮಾನ್ಯ ಕಾರ್ಯಾಚರಣಾ ಯೋಜನೆಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ವಿವಿಧ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ.
ಸಂಕಷ್ಟದಲ್ಲಿರುವ ವಿಧವೆಯರಿಗೆ ಗೌರವಯುತ ಬದುಕು ಸಾಗಿಸಲು ಸೂಕ್ತ ನೆರವು ಕಲ್ಪಿಸಲು ಸರ್ಕಾರಗಳು ಧಾವಿಸಬೇಕು ಎಂಬ ಭಾರತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಈ ಕುರಿತು ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಯಿತು.
ಸಂಕಷ್ಟದಲ್ಲಿರುವ ವಿಧವೆಯರನ್ನು ಗುರುತಿಸುವುದು ಹೇಗೆ ? ಅಂತಹ ವಿಧವೆಯರ ಸಂಕಷ್ಟಗಳನ್ನು ನಿವಾರಿಸುವುದು ಹೇಗೆ ? ಎಂಬ ಬಗ್ಗೆ ಬೆಳಕು ಚೆಲ್ಲಿದ ಉಮಾ ಮಹಾದೇವನ್ ಅವರು ಈ ಸೂಕ್ಷ್ಮ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆಧ್ಯತೆಯ ಮೇರೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧವೆಯರ ದತ್ತಾಂಶ ಕಲೆ ಹಾಕಿ:
ಮೊದಲು ವಿಧವೆಯರ ಮಾಹಿತಿ ಕಲೆ ಹಾಕಿ ದತ್ತಾಂಶ ( ಡಾಟಾ ಬ್ಯಾಂಕ್ ) ಸಿದ್ಧಪಡಿಸಿ, ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಾಶನ ಪಡೆಯುತ್ತಿರುವವರ ವಿವರಗಳ ಮಾಹಿತಿ ಒದಗಿಸಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು ಯಾವುದೇ ಪುರುಷ ಮೃತನಾದಾಗ ಮರಣ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಆತನ ವೈವಾಹಿಕ ಸ್ಥಾನಮಾನ ಕುರಿತ ಮಾಹಿತಿ ಪಡೆಯುವಂತೆ ಜನನ ಮತ್ತ ಮರಣ ನೋಂದಣಿ ನಿರ್ದೇಶನಾಲಯದ ನಿಬಂಧಕರಿಗೆ ನಿರ್ದೇಶನ ನೀಡಿದರು. ಅಲ್ಲದೆ, ದತ್ತಾಂಶ ಸಂಗ್ರಹಣೆಗೆ ರಾಷ್ಟ್ರೀಯ ಸೂಚನಾ ಕೇಂದ್ರದ ಸಹಯೋಗದೊಡನೆ ಇ-ಆಡಳಿತ ಇಲಾಖೆ ಸೂಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.
ಕಾರ್ಡ್ಗಳ ವಿತರಣೆ : ಸರ್ಕಾರದ ಸದಾಶಯ:
ಪತಿಯ ಅಗಲಿಕೆಯ ನಂತರ ಜೀವನ ನಿರ್ವಹಣೆಗೆ ಕಷ್ಟಗಳ ಮೇಲೆ ಕಷ್ಟಗಳನ್ನು ಎದುರಿಸುವ ಪರಿಸ್ಥಿತಿಯನ್ನು ತಪ್ಪಿಸಲು ವಿಧವೆಯರಿಗೆ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಅತ್ಯಾವಶ್ಯಕವೆನಿಸಿರುವ ಆಧಾರ್ ಕಾರ್ಡ್ ದೊರಕಿಸಿಕೊಡುವತ್ತ ಕಂದಾಯ ಇಲಾಖೆ ಮುಂದಾಗಬೇಕು. ಪತಿಯ ಮರಣದ 60 ದಿನಗಳೊಳಗೆ ಆಕೆಗೆ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಬೇಕು. ಆಕೆಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆರೋಗ್ಯ ವಿಮಾ ರಕ್ಷಣಾ ಕಾರ್ಡ್ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಬೇಕು. ಆಕೆಗೆ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎದುರಾದಾಗ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುವ ಆರೋಗ್ಯ ವಿಮಾ ಕಾರ್ಡ್ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಬೇಕು. ಅಂತೆಯೇ, ಪತಿಯು ಮೃತನಾದ 45 ದಿನಗಳೊಳಗೆ ಬಡತನ ರೇಖೆಗಿಂತಲೂ ಕಡಿಮೆ ಆದಾಯವಿರುವ ವಿಧವೆಯರಿಗೆ ಪಡಿತರ ಆಹಾರ ಧಾನ್ಯ ಪಡೆಯಲು ಅವಕಾಶ ಕಲ್ಪಿಸುವ ಪಡಿತರ ಚೀಟಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸಬೇಕು. ಜನ್-ಧನ್ ಯೋಜನೆಯಡಿ ಖಾತೆಗಳನ್ನು ತೆರೆಯಲು ಬ್ಯಾಂಕ್ಗಳು ವಿಧವೆಯರಿಗೆ ನೆರವಿನ ಹಸ್ತ ನೀಡಬೇಕು. ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಅನುಕೂಲವಾಗುವಂತೆ ಎಲ್ಲಾ ವಿಧವೆಯರಿಗೆ ಭಾರತೀಯ ಚುನಾವಣಾ ಆಯೋಗದ ಭಾವಚಿತ್ರ ಸಹಿತ ಮತದಾನ ಗುರುತಿನ ಚೀಟಿ ಹಾಗೂ ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತಾ ಸಂಖ್ಯಾ (ಪ್ಯಾನ್) ಕಾರ್ಡ್ ದೊರಕಿಸಿಕೊಡಬೇಕು. ಪ್ರೌಢಾವಸ್ಥೆಯ ಹೆಣ್ಣು ಮಕ್ಕಳಿಗೆ ಶುಚಿ ಯೋಜನೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸುತ್ತಿರುವ ಮಾದರಿಯಲ್ಲಿಯೇ ವಿಧವೆಯರಿಗೂ ಶುಚಿತ್ವ ಕಾಪಾಡಿಕೊಳ್ಳಲು ಶುಚಿ ಪ್ಯಾಡ್ಗಳನ್ನು ವಿತರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ವಹಿಸಬೇಕು ಎಂಬುದು ಸರ್ಕಾರದ ಸದಾಶಯ.
ಪತಿ ಮೃತನಾದ ನಂತರ ಕೌಟುಂಬಿಕ ಅಥವಾ ಸಮಾಜದ ಅವಕೃಪೆಗೆ ತುತ್ತಾಗಿ ತಮ್ಮ ಪಾಲಿನ ಕೌಟುಂಬಿಕ ಆಸ್ತಿಯ ಹಕ್ಕು ಪಡೆಯಲು ಸಂತ್ರಸ್ತ ವಿಧವೆಯರಿಗೆ ಕಾನೂನು ರೀತ್ಯಾ ಹೋರಾಟ ನಡೆಸಲು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಅಗತ್ಯ ಕಾನೂನು ಸೇವಾ ನೆರವು ಒದಗಿಸಲಿದೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಪ್ರಕರಣಗಳನ್ನು ಕ್ಷಿಪ್ರ ಪಥ ನ್ಯಾಯಾಲಯಗಳಲ್ಲಿ (ಫಾಸ್ಟ್ ಟ್ರ್ಯಾಕ್ ಕೋಟ್ರ್ಸ್) ಅಥವಾ ಲೋಕ್ ಅದಾಲತ್ಗಳಲ್ಲಿ ರಾಜೀ ಸಂಧಾನದ ಮೂಲಕ ಬಗೆಹರಿಸಲೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಸಹಾಯ ಕಲ್ಪಿಸಲಿದೆ.
ಅಲ್ಲದೆ, ಸಂಕಷ್ಟದಲ್ಲಿರುವ ವಿಧವೆಯರಿಗೆ ಅಗತ್ಯ ಹಾಗೂ ಸೂಕ್ತ ರಕ್ಷಣೆ ಕೊಡಲು ಪೊಲೀಸರೂ ಬದ್ಧರಾಗಿದ್ದಾರೆ. ತಮ್ಮ ಮಕ್ಕಳಿಂದಲೇ ದೌರ್ಜನ್ಯಕ್ಕೆ ಒಳಗಾಗುವ ಹಿರಿಯ ನಾಗರೀಕರ ರಕ್ಷಣೆಗೆ ದೆಹಲಿ ಪೊಲೀಸರು ರೂಪಿಸಿರುವ ಮಹಿಳಾ ಪೊಲೀಸ್ ಸ್ವಯಂ ಸೇವಕರ ಮಾದರಿಯಲ್ಲೇ ಮನೆಯವರಿಂದಲೇ ಬೆದರಿಕೆ ಎದುರಿಸುವ ವಿಧವೆಯರ ರಕ್ಷಣೆಗೂ ಸ್ವಯಂ ಸೇವಾ ಸಂಸ್ಥೆಯ ನೆರವಿನೊಂದಿಗೆ ಸಾಮಾನ್ಯ ಸಹಾಯವಾಣಿ ಸ್ಥಾಪಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಸಹಾಯವಾಣಿ ಸ್ಥಾಪಿಸಬೇಕೇ ? ಅಥವಾ ಪ್ರಸ್ತುತ ಚಾಲ್ತಿಯಲ್ಲಿರುವ ಪೊಲೀಸ್ ಇಲಾಖೆಯ ಡಯಲ್ 100 ಯೋಜನೆಯೊಳಗೇ ಈ ಯೋಜನೆಯನ್ನೂ ಸಮ್ಮಿಳಿತಗೊಳಿಸಬೇಕೇ ? ಎಂಬ ಅಂಶವನ್ನು ಸಧ್ಯದಲ್ಲಿಯೇ ತೀರ್ಮಾನಿಸಿ ಅಂತಿಮಗೊಳಿಸಲು ಕ್ರಮ ವಹಿಸಲಾಗುತ್ತಿದೆ. ವಿಧವಾ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ರೂಪಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಇಲಾಖೆಯ ಮೂಲಕ ಉದ್ಯಮಶೀಲತೆಗೆ ಸಂಬಂಧಿಸಿದ ವಿವಿಧ ತರಬೇತಿಗಳನ್ನು ಒದಗಿಸಲು ಯೋಜಿಸಲಾಗಿದೆ ಎಂದು ಉಮಾ ಮಹಾದೇವನ್ ಅವರು ಸಭೆಗೆ ವಿವರಿಸಿದರು.
ಮೊದಲ ಹಂತದಲ್ಲಿ ಸ್ವಾಧಾರ್ ಗೃಹಗಳು, ಆಶ್ರಯ ನಿಲಯಗಳು ( ಷೆಲ್ಟರ್ ಹೋಮ್ಸ್), ರಾಜ್ಯ ಮಹಿಳಾ ವೀಕ್ಷಣಾಲಯ ( ಸ್ಟೇಟ್ ಹೋಮ್ ಫಾರ್ ವುಮೆನ್) ಹಾಗೂ ಸ್ವಾಗತ ಕೇಂದ್ರ ( ರಿಸೆಪ್ಷನ್ ಸೆಂಟರ್ಸ್ ) ಗಳಲ್ಲಿ ಇರುವ ವಿಧವೆಯರಿಗೆ ಸಂಪೂರ್ಣ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಕ್ರಮಗಳನ್ನು ಜಾರಿಗೊಳಿಸಬೇಕು. ಅದರಂತೆ ಈ ಎಲ್ಲಾ ಕೇಂದ್ರಗಳಿಗೆ ಗಸ್ತು ಪೊಲೀಸರು (ಬೀಟ್ ಪೊಲೀಸ್) ನಿಯತವಾಗಿ ಭೇಟಿ ನೀಡಿ ಗಮನಹರಿಸಬೇಕು. ಆರೋಗ್ಯ ಶಿಬಿರಗಳನ್ನೂ ಏರ್ಪಡಿಸಿ ಆರೋಗ್ಯ ರಕ್ಷಣೆ ಒದಗಿಸಬೇಕು. ಎಲ್ಲಕ್ಕೂ ಮಿಗಿಲಾಗಿ ಅವಲಂಭಿತರಿಲ್ಲದೆ ಮೃತರಾಗುವ ವಿಧವೆಯರಿಗೆ ಗೌರವಯುತ ವಿದಾಯ ನೀಡುವ ಅವರ ಅಂತ್ಯ ಸಂಸ್ಕಾರಕ್ಕೂ ಯೋಜನೆ ರೂಪಸಿಬೇಕು. ಎರಡನೇ ಹಂತದಲ್ಲಿ ಈ ಎಲ್ಲಾ ಸವಲತ್ತು ಹಾಗೂ ಸೌಲಭ್ಯಗಳನ್ನೂ ಸ್ವತಂತ್ರವಾಗಿ ಬದುಕು ಸಾಗಿಸುತ್ತಿರುವ ವಿಧವೆಯರಿಗೂ ವಿಸ್ತರಿಸಲು ವಿಶೇಷ ಯೋಜನೆ ರೂಪಿಸಬೇಕು ಎಂಬುದು ಸರ್ಕಾರದ ಇಚ್ಛೆಯಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ