ಚಿತ್ರದುರ್ಗ, ಜು.6-ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ವಾನರಗಳ ಕಾಟ ಹೆಚ್ಚಾಗಿದ್ದು, ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿ ಮೇಲೆ ಏಕಾಏಕಿ ಎರಗಿದ ಕಪಿರಾಯ ತಲೆಯನ್ನು ಕಚ್ಚಿ ಗಂಭೀರ ಗಾಯಗೊಳಿಸಿರುವ ಘಟನೆ ವಿದ್ಯಾವಾಹಿನಿ ಶಾಲೆ ಮುಂಭಾಗ ನಡೆದಿದೆ. ತನ್ಮಯ್ ಕೋತಿ ದಾಳಿಯಿಂದ ಗಂಭೀರ ಗಾಯಗೊಂಡಿರುವ ಬಾಲಕ. ಪಟ್ಟಣದಲ್ಲಿ ವಾನರ ಸಂಖ್ಯೆ ಹೆಚ್ಚಾಗಿದ್ದು, ಸಿಕ್ಕ ಸಿಕ್ಕವರ ಮೇಲೆ ಎರಗುತ್ತಿವೆ. ಅಲ್ಲದೆ, ಸಾರ್ವಜನಿಕರು ಕೈಯಲ್ಲಿ ಆಹಾರ ಪದಾರ್ಥಗಳನ್ನು ಹಿಡಿದುಕೊಂಡು ಹೋಗುವುದೇ ದುಸ್ತರವಾಗಿದೆ. ನಿನ್ನೆ ಶಾಲೆ ಬಿಟ್ಟಾಗ ತನ್ಮಯ್ ನಡೆದುಕೊಂಡು ಮನೆಗೆ ತೆರಳುತ್ತಿದ್ದಾಗ. ಮರದ ಮೇಲಿಂದ ಎಗರಿದ ವಾನರ ತನ್ಮಯ್ನ ತಲೆಯ ಹಿಂಭಾಗ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಸ್ಥಳೀಯರು ಕೋತಿಯನ್ನು ಓಡಿಸಿ ರಕ್ಷಿಸಿದ್ದಾರೆ. ಇಂಜೆಕ್ಷನ್ ಇಲ್ಲದೆ ಪರದಾಟ:
ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಬಿಶೀಲ್ಡ್ ಎಂಬ ಚುಚ್ಚುಮದ್ದು ಇಲ್ಲದ ಕಾರಣ ಬಾಲಕನ ಪೆÇೀಷಕರು ಪರದಾಡುವಂತಾಯಿತು. ಕೂಡಲೇ 4 ಸಾವಿರ ಹಣ ತೆತ್ತು ಖಾಸಗಿ ಮೆಡಿಕಲ್ ಸ್ಟೋರ್ನಲ್ಲಿ ಚುಚ್ಚುಮದ್ದು ತಂದು ಬಾಲಕನಿಗೆ ಕೊಡಿಸಲಾಯಿತು. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆಯವರು ಕೋತಿಗಳನ್ನು ಹಿಡಿದು ಕಾಡಿಗೆ ಬಿಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.