ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆರ್ಥಿಕ ವಿತ್ತೀಯ ಕೊರತೆ ಕಾಯ್ದೆ ವ್ಯಾಪ್ತಿಯಲ್ಲೇ ನಿರ್ವಹಣೆಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

 

ಬೆಂಗಳೂರು, ಜು.6- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆರ್ಥಿಕ ವಿತ್ತೀಯ ಕೊರತೆ ಕಾಯ್ದೆ ವ್ಯಾಪ್ತಿಯಲ್ಲೇ ನಿರ್ವಹಣೆಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಜಿ ಅದರ ನಡುವೆಯೂ 2016-17ನೇ ಸಾಲಿನಲ್ಲಿ 13 ಸಾವಿರ ಕೋಟಿ ರೂ. ಬಳಕೆ ಮಾಡದೆ ಉಳಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. 2016-17ನೇ ಸಾಲಿನಲ್ಲಿ 1,86,052 ಕೋಟಿ ಆಯವ್ಯವಯದಲ್ಲಿ 1,73,045 ಕೋಟಿ ಖರ್ಚು ಮಾಡಲಾಗಿದೆ. 13,007 ಕೋಟಿ ರೂ. ಬಳಕೆಯಾಗದೆ
ಉಳಿದಿದೆ. 482.35 ಕೋಟಿ ವಾಪಸ್ ಹೋಗುವುದನ್ನು ತಡೆಯಲಿ 2017ರ ಮಾರ್ಚ್ ಕೊನೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇತರೆ ವೆಚ್ಚಗಳ ಶೀರ್ಷಿಕೆಗಳಡಿ 1265.77 ಕೋಟಿ ರೂ.ಗಳನ್ನು ತಪ್ಪಾಗಿ ವರ್ಗೀಕರಿಸಲಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಪುನರ್ ಬಜೆಟ್‍ನಲ್ಲಿ ವೆಚ್ಚ ಅನಗತ್ಯವಾಗಿತ್ತು ಎಂದು ತಿಳಿದು ಬಂದಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.
2016-17ನೆ ಸಾಲಿನಲ್ಲಿ ಸುಮಾರು 16,377 ಕೋಟಿಗಳನ್ನು ವಿವಿಧ ಅನುದಾನ ಮತ್ತು ಸಹಾಯ ಧನಕ್ಕಾಗಿ ಖರ್ಚು ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ರೈತರ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್‍ಗೆ 8,647 ಕೋಟಿ, ಅನ್ನಭಾಗ್ಯಕ್ಕೆ 1,854 ಕೋಟಿ, ಸಹಕಾರ ಇಲಾಖೆ 818 ಕೋಟಿ, ಬಸ್ ಪಾಸ್‍ಗಳಿಗೆ ಸಹಾಯಧನ ನೀಡಲು ಸಾರಿಗೆ ಇಲಾಖೆ 799 ಕೋಟಿ ನೀಡಲಾಗಿದೆ.
2015-16ನೇ ಸಾಲಿಗೆ ಹೋಲಿಸಿದರೆ ರಾಜಸ್ವ ವೆಚ್ಚ 2016-17ನೇ ಸಾಲಿನಲ್ಲಿ ಶೇ.13ರಷ್ಟು ಹೆಚ್ಚಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವೆಚ್ಚ ಶೇ.18ರಿಂದ 19ಕ್ಕೆ ವೃದ್ಧಿಯಾಗಿದೆ.
ಯೋಜನಾ ವೆಚ್ಚ 40ಸಾವಿರದಿಂದ 47 ಸಾವಿರ ಕೋಟಿಗೆ ಹೆಚ್ಚು ಬಜೆಟ್ ಶೇ.80ರಷ್ಟು ಆದಾಯ ಸಂಬಳ ನಿವೃತ್ತಿ ವೇತನ, ಬಡ್ಡಿ ಪಾವತಿ, ಸಹಾಯಧನ, ಆಡಳಿತ ವೆಚ್ಚ ಮತ್ತು ಆರ್ಥಿಕ ಬೆಂಬಲಗಳ ಯೋಜನೆಗಳಿಗೆ ವಿನಿಯೋಗವಾಗಿದೆ ಎಂದು ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ.
ಎನ್‍ಎಸ್‍ಎಸ್‍ಎಫ್ ಸಾಲಗಳ ಮೇಲಿನ ಬಡ್ಡಿಯಲ್ಲಿ 192.42 ಕೋಟಿ ಕಡಿಮೆ ಸ್ವೀಕೃತಿಯಾಗಿದೆ ಎಂದು ವಿವರಿಸಲಾಗಿದೆ. 2016-17ರಲ್ಲಿ 1293 ಕೋಟಿ ಆದಾಯ ಹೆಚ್ಚಳಗೊಂಡಿದ್ದರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ 496 ಕೋಟಿ ಇಳಿಕೆಯಾದಂತಿದೆ. ವಿತ್ತೀಯ ಕೊರತೆ 28,664 ಕೋಟಿಗಳಿದ್ದು, ಕಳೆದ ವರ್ಷಕ್ಕೆ 9,495 ಕೋಟಿ ಅಧಿಕವಾಗಿದೆ.
ಪ್ರಾಥಮಿಕ ಕೊರತೆ 15,814 ಕೋಟಿ ಇದು ಹಿಂದಿನ ಸಾಲಕ್ಕಿಂತಲೂ 7,488 ಕೋಟಿ ರೂ. ಹೆಚ್ಚಾಗಿತ್ತು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಯೂ 1086.28 ಕೋಟಿ ಮತ್ತು ನೀರು ಸರಬರಾಜು ಯೋಜನೆಯಲ್ಲಿ ಬಳಕೆಯಾಗದೆ ಉಳಿದ 612 ಕೋಟಿಗಳನ್ನು ಲೆಕ್ಕ ಹೊಂದಾಣಿಕೆ ಮಾಡಿದ್ದರಿಂದ ರಾಜಸ್ವ ಸಂಕುಚಿತಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಮುಖವಾಗಿ ಬೊಕ್ಕಸದ ಹಣ 1012.3 ಕೋಟಿ ವೆಚ್ಚಕ್ಕೆ ಹೊಂದಾಣಿಕೆ ಸಿಗುತ್ತಿಲ್ಲ ಎಂದು ಸಿಎಜಿ ವರದಿ ನೀಡಿದ್ದು, ಪಿಂಚಣಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತಪಡಿಸಿದೆ. 151 ಪ್ರಕರಣಗಳಲ್ಲಿ 139 ಕೋಟಿ ಪಿಂಚಣಿ ಅಧಿಕವಾಗಿ ಪಾವತಿಯಾಗಿದೆ 84 ಪ್ರಕರಣ 123 ಕೋಟಿ ಪುನರಾವರ್ತನೆ ಪಿಂಚಣಿ ಪಾವತಿಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಬಜೆಟ್ ಅನುದಾನ 1779.36 ಕೋಟಿಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ವರ್ಷಗಳಲ್ಲಿ ಬಿಡುಗಡೆ ಮಾಡಿರುವ ಬಗ್ಗೆ ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ.
ಆಂತರಿಕ ಉತ್ಪನ್ನಕ್ಕೆ ತೆರಿಗೆಯೇತರ ಆದಾಯದ ಅನುಪಾತ ಅತ್ಯಂತ ಕಡಿಮೆ ಇದ್ದು, ಇದನ್ನು ಸರಿದೂಗಿಸಲು ತೆರಿಗೆಯೇತರ ಆದಾಯ ಹೆಚ್ಚಿಸಬೇಕು. ಅದಕ್ಕಾಗಿ ಬಳಕೆದಾರರ ಸೆಸ್‍ನ್ನು ಪರಿಷ್ಕರಣೆ ಮಾಡುವಂತೆ ಲೆಕ್ಕ ಸುಧಾರಣಾ ಸಮಿತಿ ನೀಡಿರುವ ಶಿಫಾರಸನ್ನು ಪರಿಗಣಿಸುವಂತೆ ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ