ಬೆಂಗಳೂರು, ಜು.6- ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಎಂ.ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆಯಾದರು.
ವಿಧಾನಸಭೆಯ ಕಲಾಪ ಆರಂಭಗೊಂಡಾಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಉಪಸಭಾಧ್ಯಕ್ಷರ ಚುನಾವಣೆ ಕಲಾಪವನ್ನು ಕೈಗೆತ್ತಿಕೊಂಡರು.
ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಶಾಸಕ ಎಂ.ಕೃಷ್ಣಾರೆಡ್ಡಿ ಅವರನ್ನು ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು. ಈ ಪ್ರಸ್ತಾವವನ್ನು ಶಾಸಕ ಕೆ.ಗೋಪಾಲಯ್ಯ ಅನುಮೋದಿಸಿದರು.
ನಂತರ ಸಭಾಧ್ಯಕ್ಷರು ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಕೃಷ್ಣಾರೆಡ್ಡಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ಸಭಾಧ್ಯಕ್ಷರು ಪ್ರಕಟಿಸಿದರು.
ಸಭಾನಾಯಕರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕೃಷ್ಣಾರೆಡ್ಡಿ ಅವರನ್ನು ಉಪಸಭಾಧ್ಯಕ್ಷರ ಪೀಠಕ್ಕೆ ಕರೆದುಕೊಂಡು ಬಂದರು.
ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಾರೆಡ್ಡಿ ಅವರನ್ನು ಅಭಿನಂದಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಚಿಂತಾಮಣಿ ಕ್ಷೇತ್ರದ ಶಾಸಕ ಕೃಷ್ಣಾರೆಡ್ಡಿ ಅವರು ಸರ್ವಾನುಮತದಿಂದ ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಅವಿರೋಧವಾಗಿ ಆಯ್ಕೆಯಾಗಲು ಬೆಂಬಲ ನೀಡಿದ ಎಲ್ಲಾ ಪಕ್ಷದ ಶಾಸಕರಿಗೂ ಅಭಿನಂದನೆ ಸಲ್ಲಿಸಿದರು.
ಸಭಾಧ್ಯಕ್ಷರು ಪ್ರತಿ ದಿನ ಹೊಸ ಶಾಸಕರಿಗೆ ಸದನದ ನಿಯಮಗಳು ಹಾಗೂ ನಡವಳಿಕೆಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಉಪಸಭಾಧ್ಯಕ್ಷರಾಗಿ ಕೃಷ್ಣಾರೆಡ್ಡಿ ಅವರು ಸದನದ ಘನತೆ ಎತ್ತಿಹಿಡಿದು ಕಲಾಪಗಳನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಿಂದ ಶಾಸಕರಾಗಿರುವ ಅವರು ಅತ್ಯಂತ ಕಿರಿಯ ವಯಸ್ಸಿನವರಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷದವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಉಪಸಭಾಧ್ಯಕ್ಷರಾಗಿ ಕೃಷ್ಣಾರೆಡ್ಡಿ ಅವರು ಸರ್ವಾನುಮತದಿಂದ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಅಖಂಡ ಕೋಲಾರ ಜಿಲ್ಲೆಗೆ ಸೇರಿದವರು ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರು. ಕೃಷ್ಣಾರೆಡ್ಡಿ ಅವರು ಸಚಿವರಾಗುತ್ತಾರೆ ಎಂಬ ಭಾವನೆ ಇತ್ತು. ಅವರೂ ಕೂಡ ಸಚಿವರಾಗುವ ಇಚ್ಚೆ ವ್ಯಕ್ತಪಡಿಸಿದ್ದರು ಎಂದು ಹೇಳಿದರು.