
ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಷ್ಟ 2 ರಿಂದ ಹಾವೇರಿ ಜಿಲ್ಲೆಯಿಂದ ಹೋರಾಟ ನಡೆಸಲಾಗುವುದೆಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ಯಾವತ್ತೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಅದೇ ರೀತಿ ಸಿ.ಎಂ. ಎಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ಮತ್ತೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯದ ಹೋರಾಟವೇ ಸೂಕ್ತ ಮಾರ್ಗವಾಗಿದೆ ಎಂದು ಹೇಳಿದರು. ಅದೇ ರೀತಿ ರೈತರನ್ನು ಉದ್ಧಾರ ಮಾಡುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಕೂಡ ಮನ್ನಾ ಮಾಡಿಲ್ಲ. ಬೆಳೆಗೆ ಬೆಂಬಲ ಬೆಲೆ, ಬೆಳೆ ಸಾಲ ಮನ್ನಾ ಹೀಗೆ ಅನೇಕ ರೀತಿಯಲ್ಲಿ ರೈತರ ಶೋಷಣೆಗೆ ಒಳಗಾಗುತ್ತಾ ಬಂದಿದ್ದಾರೆ. ರಾಜ್ಯ ಸರಕಾರ ಈ ಕೂಡಲೇ ರೈತರ ಎಲ್ಲ ಬೆಡಿಕೆಗಳನ್ನು ಈಡೇರಿಸಬೇಕೆಂದು ಬಸವರಾಜ ಕರಿಗಾರ ಆಗ್ರಹಿಸಿದ್ದಾರೆ.