ಮೈಸೂರು, ಜು.6- ನಂದಿನಿ ಸಿಹಿ ಉತ್ಸವದ ಮೂಲಕ ರಿಯಾಯ್ತಿ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭವಾದ ಉತ್ಸವದಲ್ಲಿ ರಿಯಾಯ್ತಿ ನೀಡದಿದ್ದರಿಂದ ಸಾರ್ವಜನಿಕರು ಖರೀದಿಸಿದ ಸಿಹಿ ಪದಾರ್ಥಗಳನ್ನು ವಾಪಸ್ ಮಾಡಿದ ಪ್ರಸಂಗ ಇಂದು ನಗರದಲ್ಲಿ ನಡೆದಿದೆ. ನಗರದ ಮೈಸೂರು-ಬೆಂಗಳೂರು ರಸ್ತೆಯ ಮೈಸೂರು ಡೈರಿಯ ಉತ್ಪನ್ನಗಳನ್ನು ಮಾರಾಟ ಮಾಡುವ ನಂದಿನಿ ಸಿಹಿ ಉತ್ಸವವನ್ನು ಇಂದು ಬೆಳಗ್ಗೆ ಮೈಮುಲ್ ಅಧ್ಯಕ್ಷ ಮಹೇಶ್ ಉದ್ಘಾಟಿಸಿದರು.
ಇಂದಿನಿಂದ ಆರಂಭಗೊಂಡ ಈ ಉತ್ಸವ 20ವರೆಗೂ ನಡೆಯಲಿದೆ. ಡೈರಿಯ ಉತ್ಪನ್ನಗಳಾದ ಪೇಡ, ಮೈಸೂರ್ಪಾಕ್ ಸೇರಿದಂತೆ ಮತ್ತಿತರ ಸಿಬಿ ತಿಂಡಿಗಳಿಗೆ ಶೇ.10ರಷ್ಟು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವುದಾಗಿ ಬೋರ್ಡ್ ಸಹ ಹಾಕಲಾಗಿತ್ತು. ಇದನ್ನು ನೋಡಿ ಇಲ್ಲಿಗೆ ಆಗಮಿಸಿದ ಸಾರ್ವಜನಿಕರು ಖರೀದಿಸಿದ ಸಿಹಿ ಉತ್ಪನ್ನಗಳಿಗೆ ಶೇ.10ರಷ್ಟು ರಿಯಾಯ್ತಿ ನೀಡದ ಮಳಿಗೆಯವರ ಮೇಲೆ ಕುಪಿತರಾಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ನಮ್ಮಲ್ಲಿ ಹಳೇ ಸ್ಟಾಕ್ ಮಾತ್ರ ಲಭ್ಯವಿದ್ದು, ಇದಕ್ಕೆ ರಿಯಾಯ್ತಿ ನೀಡಲಾಗುವುದಿಲ್ಲ. ಹೊಸ ಸ್ಟಾಕ್ ಮಾತ್ರ ರಿಯಾಯ್ತಿ ನೀಡುವುದಾಗಿ ಹೇಳಿದ್ದರಿಂದ ಜನ ಹಿಡಿಶಾಪ ಹಾಕುತ್ತಾ ಹಿಂದುರುಗಿದ್ದಾರೆ.