ಬೆಂಗಳೂರು, ಜು.6- ವಿಧಾನಸಭೆ ಉಪಸಭಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಸದನಕ್ಕೆ ನೂತನ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅಭಿನಂದನೆ
ಸಲ್ಲಿಸಿದರು. ನೂತನ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸಭಾನಯಕರು, ಹಲವಾರು ಮಂದಿ ನಾಯಕರು ಹೇಳಿದ ಅಭಿನಂದನಾ ನುಡಿಗಳಿಗೆ ಪ್ರತಿಯಾಗಿ ಮಾತನಾಡಿದ ಕೃಷ್ಣಾರೆಡ್ಡಿ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಅಶೀರ್ವಾದದಿಂದ ಪ್ರತಿ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ಉಪಸಭಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಈ ಸ್ಥಾನಕ್ಕೆ ಎಷ್ಟು ಅರ್ಹನೋ ಗೊತ್ತಿಲ್ಲ. ಆದರೆ, ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಅದರಲ್ಲೂ ಅತ್ಯಂತ ಹಿರಿಯ ಅನುಭವಿಯಾದ ನಿಮ್ಮ ಜತೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ರಮೇಶ್ಕುಮಾರ್ ಅವರ ಕುರಿತು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ್ದ ರಮೇಶ್ಕುಮಾರ್ ಅವರು, ಸಾರ್ವಜನಿಕ ಜೀವನದಲ್ಲಿ ವಿಶ್ವಾಸ ಉಳಿಸಿಕೊಳ್ಳುವುದು ಬಹಳ ಮುಖ್ಯ. ವಿಶ್ವಾಸ ಉಳಿಸಿಕೊಳ್ಳದೆ ಸಾಸಿವೆ ಕಾಳಿನಷ್ಟು ಅನುಮಾನಗಳು ಬಂದರೂ ಇಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ. ಆತ್ಮತೃಪ್ತಿ ಇರುವುದಿಲ್ಲ ಎಂದು ಹಿತವಚನ ಹೇಳಿದರು.