ಬೆಂಗಳೂರು, ಜು.6-ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಇದೇ 18ರಂದು ಸಂಜೆ 6 ಗಂಟೆಗೆ ಪಾಲಿಕೆ ಕಚೇರಿ ಆವರಣದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷ ಬೆಂಗಳೂರು ಕರಗದ ದಿನ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಆಚರಣೆ ಮಾಡಲಾಗಿರಲಿಲ್ಲ.
ಕಳೆದ ಜೂ.27 ರಂದು ಸರ್ಕಾರ ಅರಮನೆ ಮೈದಾನದಲ್ಲಿ ಕೆಂಪೇಗೌಡ ಜಯಂತಿ ಆಚರಿಸಿತ್ತು. ಈ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಆಚರಣೆ ಮಾಡುವುದಿಲ್ಲ ಎಂಬ ಗೊಂದಲ ನಿರ್ಮಾಣವಾಗಿತ್ತು.
ಪಾಲಿಕೆ ವತಿಯಿಂದ ಪ್ರತ್ಯೇಕವಾಗಿ ಜಯಂತಿ ಆಚರಿಸಲು ದಿನಾಂಕವನ್ನು ಸಹ ನಿಗದಿಪಡಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಇದೇ 18 ರಂದು ಆಚರಣೆಗೆ ಅನುಮತಿ ನೀಡಿದ್ದಾರೆ ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದ್ದಾರೆ.
ಕೆಂಪೇಗೌಡ ಪ್ರಶಸ್ತಿಗೆ ಲಾಬಿ:
ಕೆಂಪೇಗೌಡರ ಜಯಂತಿ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಲಾಬಿ ಪ್ರಾರಂಭವಾಗಿದ್ದು, ಸುಮಾರು 200 ಅರ್ಜಿಗಳು ಬಂದಿವೆ. ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿರುವುದರಿಂದ ಜೆಡಿಎಸ್-ಕಾಂಗ್ರೆಸ್ ನಾಯಕರುಗಳ ಕಡೆಯವರಿಗೆ ಪ್ರಶಸ್ತಿ ನೀಡುವಂತೆ ಲಾಬಿ ಹೆಚ್ಚಾಗಿದ್ದು, ಅರ್ಜಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಪ್ರತಿವರ್ಷ ನಗರದ ನಾಲ್ಕು ಕಡೆ ಇರುವ ಕೆಂಪೇಗೌಡ ದ್ವಾರದಿಂದ ಜ್ಯೋತಿಗಳನ್ನು ತರಲಾಗುತ್ತಿತ್ತು. ಈ ಬಾರಿ ಮಾಗಡಿಯಲ್ಲಿ ಪತ್ತೆಯಾಗಿರುವ ಕೆಂಪೇಗೌಡರ ಸಮಾಧಿ ಸ್ಥಳದಿಂದ ಜ್ಯೋತಿ ತರಲು ನಿರ್ಧರಿಸಲಾಗಿದ್ದು, ವಿವಿಧ ಜಾನಪದ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ಜ್ಯೋತಿಗಳನ್ನು ಕರೆತರಲಾಗುವುದು.