ಬೆಂಗಳೂರು, ಜು.6-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರಿಗೆ ಅಧಿಕಾರ ಇರಲಿ, ಬಿಡಲಿ ಅವರೇ ಅಧಿಕಾರದ ಕೇಂದ್ರ ಬಿಂದು ಎಂದು ಹೇಳುವ ಮೂಲಕ ವಿಧಾನಸಭೆಯಲ್ಲಿ ಶಾಸಕ ಸಿ.ಟಿ.ರವಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಜೆಡಿಎಸ್ನ ಶಾಸಕ ಬಾಲಕೃಷ್ಣ ಮಾತನಾಡುತ್ತಿದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಎಂದು ಒತ್ತಿ ಹೇಳಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ಟಗರು ಎರಡು ಹೆಜ್ಜೆ ಹಿಂದೆ ಹೋಯ್ತು ಎಂದರೆ ಸೋತಿದೆ ಎಂದರ್ಥವಲ್ಲ. ಸರಿಯಾಗಿ ಗುದ್ದಲು ಹೆಜ್ಜೆಯ ಹಿಡಿತ ಸಾಧಿಸುತ್ತಿದೆ ಎಂದು ಅರ್ಥ ಎಂಬುದಾಗಿ ಸ್ವಾಮೀಜಿಯೊಬ್ಬರು ಹೇಳಿಕೆ ನೀಡಿದ್ದಾರೆ. ಅದನ್ನು ಸ್ವಲ್ಪ ವಿವರವಾಗಿ ಹೇಳಬೇಕು ಎಂದು ಬಾಲಕೃಷ್ಣರನ್ನು ಕಿಚಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ ಅವರು, ಸರ್ಕಾರ ರಚನೆಗೆ ಸಿದ್ದರಾಮಯ್ಯ ಅವರೇ ಬೆನ್ನೆಲುಬು. ಸರ್ಕಾರವನ್ನು ಕೆಡಹುವ ಮನಸ್ಥಿತಿ ಅವರದಲ್ಲ. ಹೆಗಲಿಗೆ ಹೆಗಲು ಕೊಟ್ಟು ಸರ್ಕಾರವನ್ನು ಅವರು ಮುಂದುವರೆಸುತ್ತಾರೆ ಎಂದು ಸಮರ್ಥಿಸಿಕೊಂಡರು.
ಅಧಿಕಾರ ಇರಲಿ, ಬಿಡಲಿ ಸಿದ್ದರಾಮಯ್ಯ ಅವರೇ ಈ ಸರ್ಕಾರದ ಕೇಂದ್ರ ಬಿಂದು, ಸಚಿವ ರೇವಣ್ಣ ಅವರು ಸದನದ ಒಳಗೆ ಬಂದಾಗ ಸಿದ್ದರಾಮಯ್ಯ ಅವರನ್ನು ಪ್ರದಕ್ಷಿಣೆ ಹಾಕಿಯೇ ಬರುತ್ತಾರೆ. ಅಷ್ಟರ ಮಟ್ಟಿಗೆ ಅವರ ಪ್ರಭಾವವಿದೆ ಎಂದು ಸಿ.ಟಿ.ರವಿ ಹೇಳಿದರು.
ನಾವೆಲ್ಲ ಒಟ್ಟಾಗಿದ್ದೇವೆ. ಬಿಜೆಪಿಯವರು ಹುಳಿ ಹಿಂಡಬೇಡಿ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.
ಸಮ್ಮಿಶ್ರ ಸರ್ಕಾರವನ್ನು ಕೆಡವಲು ವಿರೋಧಪಕ್ಷ ಬೇಕಿಲ್ಲ. ಆಡಳಿತ ಪಕ್ಷದಲ್ಲಿರುವ ಗೊಂದಲಗಳಿಂದಲೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಸಿ.ಟಿ.ರವಿ ಹೇಳಿದರು.