ಬೆಂಗಳೂರು,ಜೂ.6- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕರಾವಳಿ ಜಿಲ್ಲೆಗಳಿಗೆ ಯಾವುದೇ ಯೋಜನೆಗಳಾಗಲಿ ಇಲ್ಲವೇ ಪ್ಯಾಕೇಜ್ ನೀಡದಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಈ ಭಾಗದ ಬಿಜೆಪಿ ಶಾಸಕರು ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರಾದ ಸುನೀಲ್‍ಕುಮಾರ್, ರಾಕೇಶ್ ಪೂಂಜಾ, ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಲಾಲಾಜಿ ಮೆಂಡನ್, ಡಾ.ವೇದವ್ಯಾಸ ಭಟ್, ರಾಜೇಶ್ ನಾಯಕ್, ಮಠಂದೂರು, ರೂಪಾ ನಾಯಕ್, ಡಾ.ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಸೇರಿದಂತೆ ಕರಾವಳಿ ಭಾಗದ ಎಲ್ಲ ಶಾಸಕರು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯ ಸರ್ಕಾರ ತಕ್ಷಣವೇ ಬಜೆಟ್‍ನಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಇಲ್ಲದಿದ್ದರೆ ಸದನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಕಳ ಶಾಸಕ ಸುನೀಲ್‍ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಮಂಡಿಸಿದ ಬಜೆಟ್‍ನಲ್ಲಿ ಕರಾವಳಿ ಭಾಗದ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಮ್ಮ ಭಾಗಕ್ಕೆ ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕರಾವಳಿ ಜಿಲ್ಲೆಯ ಪ್ರಮುಖ ಭಾಗಗಳಲ್ಲಿ ರಸ್ತೆಗಳು ಕಿತ್ತುಹೋಗಿವೆ, ಅನೇಕ ಮನೆಗಳು ಬಿದ್ದು ಜನರು ನಿರ್ವಸತಿಗರಾಗಿದ್ದಾರೆ. ರಾಜ್ಯ ಸರ್ಕಾರ ನಮ್ಮ ಜಿಲ್ಲೆಯನ್ನು ಯಾವ ಕಾರಣಕ್ಕಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಪ್ರಶ್ನಿಸಿದರು.
ಬೇರೆ ಜಿಲ್ಲೆಗಳಿಗೆ ಅನುದಾನ ಕೊಟ್ಟಿರುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ ನಮ್ಮ ಭಾಗಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಯೋಜನೆಗಳನ್ನು ಘೋಷಣೆ ಮಾಡದಿರುವುದು ಈ ಭಾಗದ ಜನರಿಗೆ ಮಾಡಿದ ಅನ್ಯಾಯವಾಗಿದೆ ಎಂದರು.
ರಸ್ತೆಗಳ ಅಭಿವೃದ್ದಿಗೆ ಕನಿಷ್ಟ ಪಕ್ಷ 100 ಕೋಟಿ, ಮನೆ ಕಳೆದುಕೊಂಡವರಿಗೆ ಆರ್ಥಿಕ ನೆರವು, ಎಂಡೋಸಲ್ಫಾನ್ ಪೀಡಿತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೆ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ನಮ್ಮ ಜಿಲ್ಲೆಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಸಿಗಲಿದೆ ಎಂದು ನಮ್ಮ ಭಾಗದ ಜನರು ಸಮ್ಮಿಶ್ರ ಸರ್ಕಾರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಒಂದೇ ಒಂದು ಬಿಡಿಗಾಸು ನೀಡದೇ ನಮ್ಮ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ 15 ದಿನಗಳಿಂದ ಸುರಿದ ಮಳೆಯಿಂದಾಗಿ ಶಿರಡಿ ಮತ್ತು ಚಾರ್ಮುಡಿ ಘಾಟ್ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗಿದೆ. ಇದೇ ರೀತಿ ರಾಷ್ಟ್ರೀಯ ಮತ್ತು ಜಿಲ್ಲಾ ಹೆದ್ದಾರಿ ರಸ್ತೆಗಳು ಕೂಡ ಹಾಳಾಗಿವೆ. ನಮ್ಮ ಭಾಗದ ರಸ್ತೆಗಳ ಅಭಿವೃದ್ಧಿಗೆ ಕಡೆ ಪಕ್ಷ 100 ಕೋಟಿಯಾದರೂ ಹಣವನ್ನು ನೀಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವ ಕಾರಣಕ್ಕಾಗಿ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಎಂಡೋಸಲ್ಫಾನ್ ಪೀಡಿತರಿಗೆ ಆರ್ಥಿಕ ನೆರವು, ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, ಶಾಶ್ವತ ನೆರೆ ಹಾವಳಿ ತಡೆಗಟ್ಟುವುದು, ಕೌಶಲ್ಯಾಭಿವೃದ್ಧಿ ಒತ್ತು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಿತ್ತು ಎಂದರು. ಬೇರೆ ಜಿಲ್ಲೆಗಳಿಗೂ ಕೊಟ್ಟಂತೆ ನಮ್ಮ ಭಾಗಕ್ಕೂ ನೀಡಬೇಕು. ಕರಾವಳಿ ಜಿಲ್ಲೆಗಳಿಂದ ಜೆಡಿಎಸ್‍ನ ಯಾವುದೇ ಶಾಸಕರು ಗೆದ್ದಿಲ್ಲ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಈ ರೀತಿ ಕಡೆಗಣಿಸಿರುವುದು ಸರಿಯಲ್ಲ. ನೀವು ರಾಜ್ಯದ ಮುಖ್ಯಮಂತ್ರಿಯೇ ಹೊರತು ಜೆಡಿಎಸ್‍ನ ಮುಖ್ಯಮಂತ್ರಿಯಲ್ಲ.
ಬಜೆಟ್‍ನಲ್ಲಿನ ಚರ್ಚೆ ವೇಳೆ ನಮ್ಮ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.