ಬೆಂಗಳೂರು, ಜು.6- ರೈತರ ಸಾಲಮನ್ನಾ ಮಾಡಲು ತೀರ್ಮಾನಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬಿಬಿಎಂಪಿ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು ಸರ್ಕಾರಕ್ಕೆ ಕೊಡಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಪಾಲಿಕೆ ಸಭೆಯಲ್ಲಿಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಈ ವಿಷಯ ಪ್ರಸ್ತಾಪಿಸಿ, ಬಜೆಟ್‍ನಲ್ಲಿ ಬೆಂಗಳೂರಿಗೆ ಹಲವು ಕೊಡುಗೆಗಳನ್ನು ನೀಡಲಾಗಿದೆ. ಮೆಟ್ರೋ, ರಸ್ತೆ, ಮೂಲಭೂತ ಸೌಕರ್ಯ ನೀಡಲಾಗಿದೆ. ಇದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಬೆಂಗಳೂರಿನ ಜನ ರೈತರನ್ನೇ ನಂಬಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಅದಕ್ಕಾಗಿ ಸರ್ಕಾರವನ್ನು ಅಭಿನಂದಿಸುತ್ತೇನೆ. ಸಾಲಮನ್ನಾ ಮಾಡಲು ಒಂದು ತಿಂಗಳ ವೇತನವನ್ನು ಸದಸ್ಯರು ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮೇಯರ್ ಸಂಪತ್‍ರಾಜ್, ನಾನು ನನ್ನ ಎರಡು ತಿಂಗಳ ವೇತನವನ್ನು ಕೊಡುತ್ತೇನೆ ಎಂದು ಹೇಳಿದರು.
ನಂತರ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಒಂದು ತಿಂಗಳ ಸಂಬಳ ನೀಡುವಂತೆ ಮನವಿ ಮಾಡಿದ್ದೀರಿ. ಬಿಜೆಪಿ ಸದಸ್ಯರಾದ ನಾವೂ ಕೊಡುತ್ತೇವೆ. ಅಲ್ಲದೆ, ವೈಯಕ್ತಿಕವಾಗಿ ನಾನು 1 ಲಕ್ಷ ರೂ. ಕೊಡುತ್ತೇನೆ. ಈ ಹಣ ನಿಜಕ್ಕೂ ರೈತರ ಸಾಲಮನ್ನಾಗೇ ಹೋಗಬೇಕು ಎಂದು ಹೇಳಿದರು.
ರೈತರ ಸಾಲಮನ್ನಾ ಆಗಬೇಕೆಂಬುದೇ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಆಶಯವೂ ಆಗಿದೆ ಎಂದರು.
ಬಜೆಟ್ ಕುರಿತು ಪದ್ಮನಾಭರೆಡ್ಡಿ ಪ್ರಸ್ತಾಪಿಸಿ ವಿವಿಧ ಕಾಮಗಾರಿಗಳಿಗೆ 2500 ಕೋಟಿ ಬಳಕೆ ಮಾಡಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ, ಅದರ ಬಗ್ಗೆ ಈಗಿನ ಬಜೆಟ್‍ನಲ್ಲಿ ಉಲ್ಲೇಖವೇ ಆಗಿಲ್ಲ. ಸರ್ಕಾರದಿಂದ ಹೇಳಿದಷ್ಟು ಹಣವೂ ಬಿಡುಗಡೆ ಆಗಿಲ್ಲ ಎಂದು ಹೇಳಿದರು.
ವರ್ಕ್ ಆರ್ಡರ್ ನೀಡಲಾಗಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ಇದರಿಂದ ಪಾಲಿಕೆಗೆ ಹೆಚ್ಚು ಹೊರೆಯಾಗಲಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಉತ್ತರ ಪಡೆಯುವಂತೆ ಪದ್ಮನಾಭರೆಡ್ಡಿ ಸಲಹೆ ನೀಡಿದರು.
ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಮಾತನಾಡಿ, ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಗಾದೆಯನ್ನು ಹೇಳಿ ವಿರೋಧ ಮಾಡುವವರು ವಿರೋಧ ಮಾಡುತ್ತಲೇ ಇರುತ್ತಾರೆ ಎಂದು ಬಜೆಟ್‍ಆನ್ನು ಸಮರ್ಥಿಸಿಕೊಂಡರು.
ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ನಾವು ಕೂಡ ರೈತರ ಸಾಲಮನ್ನಾಗೆ ಒಂದು ತಿಂಗಳ ವೇತನ ನೀಡುತ್ತೇವೆ. ಪ್ರತಿಪಕ್ಷದವರೂ ಇದಕ್ಕೆ ಒಪ್ಪಿಗೆ ಸೂಚಿಸಿರುವುದು ಸಂತಸ ಎಂದು ಹೇಳಿದರು.
ನಾವೂ ರೈತ ಕುಟುಂಬದಿಂದಲೇ ಬಂದವರು. ಎಲ್ಲರೂ ಸೇರಿ ಇದಕ್ಕೆ ನಿರ್ಣಯ ತರಬೇಕು. ಇನ್ನೂ ನಾಲ್ಕು ವರ್ಷ ಸಮ್ಮಿಶ್ರ ಸರ್ಕಾರ ಇರಲಿದೆ. ಇನ್ನಷ್ಟು ಯೋಜನೆಗಳನ್ನು ಕೊಡುಗೆ ನೀಡಲಿದೆ ಎಂದು ನೇತ್ರಾ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
14.85 ಲಕ್ಷ ಗೌರವ ಧನದ ಮೊತ್ತ ಸಾಲಮನ್ನಾಗೆ ನೀಡಲು ಬಿಬಿಎಂಪಿ ಸದಸ್ಯರು ಸಭೆಯಲ್ಲಿ ನಿರ್ಧರಿಸಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ವೈಯಕ್ತಿಕವಾಗಿ ನೀಡುವ 1 ಲಕ್ಷ ರೂ. ಸೇರಿ ಒಟ್ಟು 16 ಲಕ್ಷವನ್ನು ಸಾಲಮನ್ನಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.