ನವದೆಹಲಿ, ಜು.6-ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ನಡುವೆ ತಿಕ್ಕಾಟ ಮುಂದುವರೆದಿದೆ. ಲೆಫ್ಟಿನೆಂಟ್ ಗೌರ್ನರ್ ಅವರ ಆಕ್ಷೇಪದ ನಡುವೆಯೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಡವರ ಮನೆ ಬಾಗಿಲಿಗೆ ಪಡಿತರಗಳನ್ನು ವಿತರಿಸುವ ಪ್ರಸ್ತಾವನೆಗೆ ಸಮ್ಮತಿ ನೀಡಿದ್ದಾರೆ. ಇದರೊಂದಿಗೆ ಹಗ್ಗಾ-ಜಗ್ಗಾಟ ಮುಂದುವರೆದಂತಾಗಿದೆ. ಮನೆ ಬಾಗಿಲಿಗೆ ಪಡಿತರ ಪೂರೈಸುವ ಎಎಪಿ ಸರ್ಕಾರದ ಯೋಜನೆಗೆ ಅನಿಲ್ ಬೈಜಾಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಕಡತವನ್ನು ಹಿಂದಕ್ಕೆ ಕಳುಹಿಸಿದ್ದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಮುಖ್ಯಮಂತ್ರಿ ಈ ಕೂಡಲೇ ಮನೆ ಬಾಗಿಲಿಗೆ ಪಡಿತರ ವಿತರಿಸುವ ಯೋಜನೆಯನ್ನು ಅನುಷ್ಟಾನಗೊಳಿಸುವಂತೆ ಆಹಾರ ಇಲಾಖೆಗೆ ಆದೇಶ ನೀಡಿ ಸೆಡ್ಡು ಹೊಡೆದಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಲೆಫ್ಟಿನೆಂಟ್ ಗೌರ್ನರ್ ಅವರಿಗೆ ಸ್ವತಂತ್ರ ಅಧಿಕಾರ ಇಲ್ಲ. ಚುನಾಯಿತ ಸರ್ಕಾರವೇ ವಿಶೇಷ ಅಧಿಕಾರ ಹೊಂದಿರುತ್ತದೆ ಎಂದು ಎರಡು ದಿನಗಳ ಹಿಂದೆಯಷ್ಟೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರೆ ನಡುವೆಯೂ ಗೊಂದಲ ಅಂತ್ಯ ಕಾಣದೆ ಮುಂದುವರೆದಿದೆ.