ಜಮ್ಮು, ಜು.6-ಹವಾಮಾನ ವೈಪರೀತ್ಯದಿಂದಾಗಿ ಸತತ ಮೂರನೇ ದಿನವೂ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. ಜಮ್ಮುವಿನಿಂದ ಮುಂದೆ ಸಾಗಲು ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿಲ್ಲ.
ಅಮರನಾಥ ಯಾತ್ರಿಕರು ಕಾಶ್ಮೀರದ ಬಾಲ್‍ತಾಲ್ ಮತ್ತು ಪಹಲ್‍ಗಂ ಮೂಲ ಶಿಬಿರದಲ್ಲೇ ವಾಸ್ತವ್ಯ ಹೂಡಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ 30,000ಕ್ಕೂ ಹೆಚ್ಚು ಯಾತ್ರಿಕರು ಈ ಎರಡು ಬೇಸ್ ಕ್ಯಾಂಪ್‍ಗಳಲ್ಲಿ ತಂಗಿದ್ದಾರೆ. ರಾಜ್ಯಪಾಲ ಎನ್.ಎನ್.ವೋಹ್ರಾ ಇಂದು ಬಾಲ್‍ತಾಲ್‍ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಪರಿಸ್ಥಿತಿ ಸುಧಾರಿಸಿದರೆ, ಅಧಿಕಾರಿಗಳು ಯಾತ್ರೆ ಮುಂದುವರಿಸುವ ಬಗ್ಗೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವರು. ಭಾರೀ ಮಳೆ ಮತ್ತು ಪ್ರವಾಹದಿಂದ ಈ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಜೂನ್ 28ರಿಂದ ಆರಂಭವಾಗಿರುವ ಅಮರನಾಥ ಯಾತ್ರೆಯಲ್ಲಿ ತಂಡೋಪತಂಡವಾಗಿ 68,000 ಯಾತ್ರಿಕರು ಪಾಲ್ಗೊಂಡಿದ್ದಾರೆ.