ದಾವಣಗೆರೆ, ಜು.6- ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕರೊಬ್ಬರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕಿ ಗೀತಾ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ರೈತಬಂಧು ಕೋ ಆಪರೇಟಿವ್ ಸೊಸೈಟಿಯ ನೋಂದಣಿ ಮಾಡಿಸಲು ರುದ್ರೇಶ್ ಎಂಬುವರು ಮಾರ್ಚ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನೋಂದಣಿಯಾಗಿರಲಿಲ್ಲ. ನಗರದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಗೀತಾ ನೋಂದಣಿ ಮಾಡಿಕೊಡಲು 25 ಸಾವಿರ ರೂ. ನೀಡುವಂತೆ ಸೂಚಿಸಿದ್ದರು. ನಿನ್ನೆ 15 ಸಾವಿರ ರೂ. ಕೊಡುವುದಾಗಿ ಆಕೆಗೆ ತಿಳಿಸಿ ನಂತರ ಎಸಿಬಿಗೆ ದೂರು ನೀಡಿದ್ದರು. ರುದ್ರೇಶ್ನಿಂದ ಲಂಚದ ಹಣ 15 ಸಾವಿರ ಪಡೆಯುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ಪರಮೇಶ್ವರ್ ನೇತೃತ್ವದ ತಂಡ ದಾಳಿ ಮಾಡಿ ಗೀತಾರನ್ನು ವಶಕ್ಕೆ ಪಡೆದು ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.