ಕನಕಪುರ, ಜು.6-ಒಂಟಿ ಸಲಗ ದಾಳಿ ಮಾಡಿದ್ದರಿಂದ ದನಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಡಿಹಳ್ಳಿ ಹೋಬಳಿಯಲ್ಲಿ ನಡೆದಿದೆ. ಹುಣಸನಹಳ್ಳಿ ಗ್ರಾಮದ ಚಿಕ್ಕಮಾರಯ್ಯ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿನ್ನೆ ಈತ ಕಾಡಂಚಿನಲ್ಲಿ ದನ, ಕುರಿ ಕಾಯಲು ಹೋಗಿದ್ದ ಈ ವೇಳೆ ಒಂಟಿ ಸಲಗ ಹಿಂದಿನಿಂದ ಬಂದು ದಾಳಿ ಮಾಡಿ ಎಸೆದಿದೆ. ಈತ ಕೂಗಿಕೊಂಡಾಗ ಅಕ್ಕಪಕ್ಕದ ಜಮೀನಿನವರು ಧಾವಿಸಿ ಖಾಲಿ ಡಬ್ಬಗಳನ್ನು ಬಡಿದು ಜೋರು ಶಬ್ಧ ಮಾಡಿ ಆನೆಯನ್ನು ಓಡಿಸಿದ್ದಾರೆ.
ಚಿಕ್ಕಮಾರಯ್ಯನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಸಂಜಯ್ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಡಿಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.
ಆಗ್ರಹ: ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಬೆಳೆ ನಾಶದ ಜತೆಗೆ ಸಾವು-ನೋವು ಸಂಭವಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡು ರೈತರಿಗೆ ನೆಮ್ಮದಿ ನೀಡಬೇಕು ಹಾಗೂ ಚಿಕ್ಕಮಾರಯ್ಯನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರಾದ ಶಾಂತರಾಜು, ಬಸವರಾಜು, ಮಲ್ಲೇಶ್, ರಮೇಶ್ ಮತ್ತಿತರರು ಆಗ್ರಹಿಸಿದ್ದಾರೆ.