ಬೆಂಗಳೂರು, ಜು.5- ಬೆಂಗಳೂರು ನಗರದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ಮುಖ್ಯಮಂತ್ರಿಯವರ 1 ಲಕ್ಷ ಮನೆಗಳು ಎಂಬ ಯೋಜನೆಯನ್ನು ಮುಂದಿನ ವರ್ಷಗಳಲ್ಲಿ ಎಲ್ಲ ನಗರಗಳಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇಂದು ತಾವು ಮಂಡಿಸಿದ ಬಜೆಟ್ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ಬೆಂಗಳೂರು ನಗರದಲ್ಲಿ ಬಡವರಿಗೆ ಮನೆಗಳನ್ನು ಒದಗಿಸುವಲ್ಲಿ ಇರುವ ತೊಂದರೆಗಳನ್ನು ನಿವಾರಿಸಲು ಆಯ್ದ ಸ್ಥಳಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ಜಿ+14 ನಿರ್ಮಿಸಲು (ನೆಲಮಹಡಿ ಮತ್ತು 14 ಅಂತಸ್ತು) ಸರ್ಕಾರ ಉದ್ದೇಶಿಸಿದೆ ಎಂದರು.
ರಾಜ್ಯದ ಕೊಳಗೇರಿಗಳಲ್ಲಿರುವ ಜನಸಂಖ್ಯೆ 44 ಲಕ್ಷಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದ್ದು ಕೊಳಗೇರಿಗಳನ್ನು ಅಭಿವೃದ್ಧಿಪಡಿಸುವ ಹಕ್ಕನ್ನು ವರ್ಗಾಯಿಸುವ (ಟಿಡಿಆರ್) ಬದಲಿಗೆ ಹೆಚ್ಚುವರಿ ನೆಲಗಟ್ಟು ಪ್ರದೇಶದ ಅನುಪಾತ (ಎಫ್ಎಆರ್) ಒದಗಿಸುವ ಮೂಲಕ ನಗರ ಪ್ರದೇಶಗಳಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು ಈ ಬಗ್ಗೆ ವಿಸ್ತೃತವಾದ ಮಾರ್ಗಸೂಚಿಯನ್ನು 2019-20 ರಿಂದ ಜಾರಿಗೆ ತರಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 14 ಲಕ್ಷ ಮನೆಗಳು ನಿರ್ಮಾಣವಾಗಿದ್ದು ನಮ್ಮ ಮೈತ್ರಿ ಸರ್ಕಾರವು ವಸತಿ ಯೋಜನೆಯನ್ನು ಮುಂದುವರಿಸಲು ಉದ್ದೇಶಿಸಿದೆ. ಬೇಡಿಕೆಗೆ ಅನುಗುಣವಾಗಿ ಮನೆಗಳನ್ನು ನಿರ್ಮಾಣ ಮಾಡಲು ಸಂಕಲ್ಪ ತೊಟ್ಟಿದೆ.
ಪ್ರಸ್ತುತ ವಸತಿ ಯೋಜನೆಯಲ್ಲಿ ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇದ್ದು ಬೇಡಿಕೆಯ ಮೇರೆಗೆ ಆನ್ಲೈನ್ ಅರ್ಜಿಗಳನ್ನು ಕರೆದು ಮನೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.