
ಮುಂಬೈ, ಜು.5-ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಗೃಹ ಮತ್ತು ಉದ್ಯಮ ಸಂಸ್ಥೆಗಳಿಗಾಗಿ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಆರಂಭಿಸಿದ್ದಾರೆ. ಭಾರತದ 1,100 ನಗರಗಳಲ್ಲಿ ವ್ಯಾಪಿಸಿರುವ ಮನೆಗಳಿಗೆ ಮತ್ತು ಉದ್ಯಮ ಸಂಸ್ಥೆಗಳಿಗೆ ನಾವು ಫೈಬರ್ ಸಂಪರ್ಕ ಸೇವೆ ಕಲ್ಪಿಸುತ್ತಿದ್ದೇವೆ ಎಂದು ಅವರು ಪ್ರಕಟಿಸಿದರು. ಇದರೊಂದಿಗೆ ಆರ್ಐಎಲ್ ಸಂಸ್ಥೆಯು ಫೈಬರ್ ಟು ದಿ ಹೋಮ್ ಸೇವಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಕಳೆದ ವರ್ಷದಿಂದ ರಿಲಯನ್ಸ್ ಜಿಯೋ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದ್ದು, ಈಗ 21.5 ಕೋಟಿ ಆಗಿದೆ ಎಂದು ಅಂಬಾನಿ ಘೋಷಿಸಿದರು. ಮುಂಬೈನಲ್ಲಿ ಇಂದು ನಡೆದ ಆರ್ಐಎಲ್ನ 51ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ರಿಲಯನ್ಸ್ ಈಗ ಸುವರ್ಣ ದಶಕದಲ್ಲಿದೆ. ಜಿಯೋ ಡೇಟಾ ಬಳಕೆ 240 ಕೋಟಿ ಜಿಬಿ ಆಗಿದೆ ಎಂದು ಹೇಳಿದರು.