ಬೆಂಗಳೂರು,ಜು.5- ವಿಧಾನಸಭೆ ಚುನಾವಣೆಗೂ ಮುನ್ನ ನಾಡಿನ ಜನತೆಗೆ ಕೊಟ್ಟ ವಾಗ್ದಾನದಂತೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ರೈತರು ಪಡೆದಿದ್ದ 2 ಲಕ್ಷ ರೂ.ವರೆಗಿನ ಸುಮಾರು 34000 ಕೋಟಿ ಸಾಲ ಮನ್ನಾ ಮಾಡುವ ಮಹತ್ವದ ಯೋಜನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ತಮ್ಮ ಚೊಚ್ಚಲ ಬಜೆಟ್ನಲ್ಲಿ ಘೋಷಣೆ ಮಾಡಿದರು.
ಈ ಮೂಲಕ ಸಂಕಷ್ಟದಲ್ಲಿರುವ ನಾಡಿನ ಅನ್ನದಾತನ ನೆರವಿಗೆ ದೋಸ್ತಿ ಸರ್ಕಾರ ಧಾವಿಸಿದೆ. 2017ರ ಡಿಸೆಂಬರ್ 31ವರೆಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಸುಸ್ತಿ ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುವುದಾಗಿ ಅವರು ಪ್ರಕಟಿಸಿದರು.
ವಿಧಾನಸಭೆಯಲ್ಲಿಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪ್ರಥಮ ಬಜೆಟ್ ಮಂಡಿಸಿದ ಅವರು, ಬೆಳೆ ಸಾಲ ಮನ್ನಾ, ಗರ್ಭಿಣಿಯರು ಮತ್ತು ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ, ಇಂದಿರಾ ಕ್ಯಾಂಟೀನ್ ವಿಸ್ತರಣೆ, ಪ್ರತಿಯೊಬ್ಬ ನಾಗರಿಕರಿಗೆ ಉತ್ತಮ ಆರೋಗ್ಯ ಒದಗಿಸಲು ಕರ್ನಾಟಕ ಆರೋಗ್ಯ ಸೇವೆ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಕೆ , ಸರ್ಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್ಗೆ ಚಾಲನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.
ಆದರೆ ಜನಪ್ರಿಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡದೆ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರೆಸಿ ಆರ್ಥಿಕ ಇತಿಮಿತಿಗೆ ಒತ್ತು ನೀಡಿ, ಸಂಪನ್ಮೂಲ ಕ್ರೋಢೀಕರಣಕ್ಕೂ ಗಮನಹರಿಸಿ, ಕಾಲಮಿತಿಯೊಳಗೆ ಅನುಷ್ಠಾನ ಮಾಡುವಂತಹ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಪ್ರಕಟಿಸಿದರು.
ಇದೇ ವೇಳೆ ಸಾಲದ ಹೊರೆಯನ್ನು ತಗ್ಗಿಸಲು ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಿರುವ ಕುಮಾರಸ್ವಾಮಿ ಅವರು, ಡೀಸೆಲ್, ಪೆಟ್ರೋಲ್, ವಿದ್ಯುತ್ ಹಾಗೂ ಮದ್ಯದ ದರವನ್ನು ಏರಿಸಿ ಗ್ರಾಮೀಣ ಭಾಗದ ಜನತೆಗೂ ತೆರಿಗೆ ಭಾರವನ್ನು ಹೊರಿಸಿದ್ದಾರೆ.
ಸಾಲಮನ್ನಾ:
ಇನ್ನು ಭಾರೀ ಚರ್ಚೆಗೆ ಗ್ರಾಸವಾಗಿದ್ದ ರೈತರ ಸಾಲಮನ್ನಾ ಯೋಜನೆ ಬಜೆಟ್ನಲ್ಲಿ ಘೋಷಣೆಯಾಗಿದೆ. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ ರೈತರು 2017ರ ಡಿಸೆಂಬರ್ 31ರವರೆಗೆ ಪಡೆದಿರುವ ಎರಡು ಲಕ್ಷದವರೆಗಿನ 34 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಒಂದೆಡೆ ಸಾಲ ಮನ್ನಾ ಮಾಡಿರುವ ಸರ್ಕಾರ ಮತ್ತೊಂದೆಡೆ ದೊಡ್ಡ ದೊಡ್ಡ ಜಮೀನುದಾರರು, ಆಸ್ತಿವಂತರು, ಆರ್ಥಿಕ ಸಬಲರಾಗಿರುವವರಿಗೆ ಇದರ ಲಾಭ ಸಿಗದಂತೆ ಕೆಲವು ಮಾನದಂಡಗಳನ್ನು ಹಾಕಿದೆ.
ಈ ಪ್ರಕಾರ ಸರ್ಕಾರಿ ಅಧಿಕಾರಿಗಳು, ಸಹಕಾರ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಮತ್ತು ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರು ಹಾಗೂ ಅನರ್ಹ ಕೃಷಿ ಸಾಲಗಾರರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿ ರೈತರ 8,165 ಕೋಟಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಈಗಾಗಲೇ 4165 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಉಳಿದುವರ 4 ಸಾವಿರ ಕೋಟಿಯನ್ನು ಈ ಆಯವ್ಯಯದಲ್ಲಿ ಪಾವತಿ ಮಾಡುವುದಾಗಿ ಹೇಳಿದರು.
ಮಧ್ಯಮ ವರ್ಗದವರಿಗೆ ತೆರಿಗೆ ಭಾರ:
ರೈತರ ಸಾಲಮನ್ನಾದಿಂದ ಹೊರೆಯಾಗಲಿರುವ ಭಾರವನ್ನು ತಗ್ಗಿಸಲು ಪೆಟ್ರೋಲ್, ಡೀಸೆಲ್, ಅಬಕಾರಿ ಹಾಗೂ ಸಾರಿಗೆ ತೆರಿಗೆಯನ್ನು ಹೆಚ್ಚಳ ಮಾಡುವ ಮೂಲಕ ಜನತೆಗೆ ತೆರಿಗೆ ಭಾರದ ಬಿಸಿಯನ್ನೂ ಮುಟ್ಟಿಸಿದ್ದಾರೆ.
ಅಲ್ಲದೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 10 ಪೈಸೆಯಿಂದ 25 ಪೈಸೆಗೆ ಹೆಚ್ಚಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಹಿಂದಿನ ಸರ್ಕಾರ ಜಾರಿ ಮಾಡಿದ್ದ ಇಂದಿರಾ ಕ್ಯಾಂಟೀನ್ ಇನ್ನು ಮುಂದೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆಯಾಗಲಿದೆ. ಸುಮಾರು 247 ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಿದ್ದು ,ಇದಕ್ಕಾಗಿ 211 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
ಇಸ್ರೇಲ್ ಮಾದರಿಯ ಕೃಷಿಯನ್ನು ಅಳವಡಿಕೆಗೆ ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. 5 ಹೆಕ್ಟೇರ್ ಕುಷ್ಕಿ ಜಮೀನಿನಲ್ಲಿ ನೀರಾವರಿ ಅಳವಡಿಕೆಗಾಗಿ 150 ಕೋಟಿ ರೂ. ಮೀಸಲಿರಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೂರು ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ. ತಲಘಟ್ಟಪುರದಲ್ಲಿ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಸ್ಥಾಪನೆ ಹಾಗೂ ಈ ಸಂಸ್ಥೆಯ ಪುನಶ್ಚೇತನಕ್ಕಾಗಿ 5 ಕೋಟಿ ನೆರವನ್ನು ನೀಡಿದ್ದಾರೆ.
ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆಯನ್ನು ಅಭಿವೃದ್ಧಿಗೊಳಿಸಲು ಈ ಬಾರಿ ಕಾಯಕ ಯೋಜನೆಯನ್ನು ಬಳಸಿದೆ. ಈ ಯೋಜನೆಯಡಿ ಸ್ವಸಹಾಯ ಗುಂಪುಗಳು ವೈಯಕ್ತಿಕವಾಗಿ ಇಲ್ಲವೇ ಸ್ವಂತ ಉದ್ಯೋಗ ಆರಂಭಿಸಲು 10 ಲಕ್ಷ ರೂ.ವರೆಗೂ ಸಾಲ ಒದಗಿಸಲಾಗುವುದು. ಐದು ಲಕ್ಷದವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ, 5ರಿಂದ 10 ಲಕ್ಷದವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ದರ ನಿಗದಿಯಾಗಿದೆ.
ಶಿಕ್ಷಣಕ್ಕೆ ವಿಶೇಷ ಒತ್ತು ಕೊಟ್ಟಿರುವ ಕುಮಾರಸ್ವಾಮಿ ಅವರು, ಈ ಬಾರಿ ಸರ್ಕಾರಿ ಪ್ರಾಥಮಿಕ ಹಾಗೂ ಪದವಿಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗಾಗಿ 150 ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಒಂದು ಸಾವಿರ ಶಾಲೆಗಳಲ್ಲಿ ಇದು ಜಾರಿಗೆ ಬರಲಿದೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಸಾಧನ ಅಳವಡಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಪ್ರತಿನಿಧಿಸಿದ ಕನಕಪುರ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ.
ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿನಿಧಿಸಿದ ರಾಮನಗರಕ್ಕೆ 300 ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಡ್ಯ ಜಿಲ್ಲೆಯಲ್ಲಿ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 300 ಕೋಟಿ ಅನುದಾನ ನೀಡಲಾಗಿದೆ.
ಬೆಳಗಾವಿ, ಕಲಬುರಗಿ, ಮೈಸೂರು ನಗರಗಳಲ್ಲಿ ಹೃದ್ರೋಗ -ಕ್ಯಾನ್ಸರ್ ರೋಗಿಗಳಿಗಾಗಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಗಳು, ಗದಗ, ಕೊಪ್ಪಳ , ಚಾಮರಾಜನಗರ, ಹಾಸನ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಗಳನ್ನು ಸ್ಥಾಪಿಸಲು ಸರ್ಕಾರ ಘೋಷಿಸಿದೆ.
ಗರ್ಭಿಣಿಯರಿಗೆ ಆರ್ಥಿಕ ನೆರವು ಒದಗಿಸಲು ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಜಾರಿಯಲ್ಲಿರುವ ವೃದ್ದಾಶ್ರಮವನ್ನು ಹೋಬಳಿ ಮಟ್ಟದಲ್ಲಿ ಪ್ರಾರಂಭ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ.
ಈ ಬಾರಿ ಒಟ್ಟು ದಾಖಲೆಯ 2,13,488 ಕೋಟಿ ಮೊತ್ತದ ಬಜೆಟ್ ವಿವರದ ಭಾಷಣವನ್ನು ಮುಖ್ಯಮಂತ್ರಿ ಅವರು ಒಂದು ಗಂಟೆ 48 ನಿಮಿಷ ಮಂಡಿಸಿದರು.