ಬೆಂಗಳೂರು, ಜು.5- ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಮೇಲೆ ಶೇ.3ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಶುಲ್ಕ ವಿಧಿಸಲು ಮುಂದಾಗಿದೆ.
ಪ್ಲಾಸ್ಟಿಕ್ ವಸ್ತುಗಳಿಂದ ಮನುಷ್ಯರ ಮೇಲೆ ಉಂಟಾಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2016ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಜಾರಿಗೆ ತಂದಿದೆ.
ಈ ನಿಯಮದನ್ವಯ ಪ್ಲಾಸ್ಟಿಕ್ ಉಪಯೋಗಿಸಿ ಪ್ಯಾಕಿಂಗ್ ಮಾಡುವ ಎಲ್ಲ ಉತ್ಪನ್ನಗಳ ಮೇಲೆ ಶುಲ್ಕ ವಿಧಿಸಬಹುದಾಗಿದೆ.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ಲಾಸ್ಟಿಕ್ನಿಂದ ಪ್ಯಾಕ್ ಮಾಡಿದ ವಸ್ತುಗಳ ಮೇಲಿನ ಎಂಆರ್ಪಿ ಆಧಾರದಲ್ಲಿ ಶೇ.3ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಶುಲ್ಕ ವಿಧಿಸಲು ಸರ್ಕಾರ ತೀರ್ಮಾನಿಸಿದೆ.
ನಿರ್ವಹಣಾ ಶುಲ್ಕದಿಂದ ಬರುವ ಹಣವನ್ನು ಪ್ಲಾಸ್ಟಿಕ್ ಸಂಸ್ಕರಣೆಗಾಗಿ ಬಳಸಿ ಪರಿಸರ ಸಂರಕ್ಷಣೆ ಮಾಡಲಾಗುವುದು ಎಂದು ಬಜೆಟ್ ಪ್ರತಿಯಲ್ಲಿ ಹೇಳಲಾಗಿದೆ.






