ಮಾತೃಶ್ರೀ ಯೋಜನೆÀ ನವೆಂಬರ್ 1ರಿಂದ

 

ಬೆಂಗಳೂರು,ಜು.5- ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಗರ್ಭಿಣಿಯರಿಗೆ ಮಾಸಾಶನ ನೀಡಲು ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ವಿಧಾನಸೌಧದಲ್ಲಿ ಮಂಡಿಸಿದ ಬಜೆಟ್ ಮಂಡನೆಯಲ್ಲಿ ಇದನ್ನು ಘೋಷಣೆ ಮಾಡಿದರು.
ಮುಖ್ಯಮಂತ್ರಿ ಮಾತೃ ಯೋಜನೆಯ ಪ್ರಕಾರ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮಾಸಿಕ ಒಂದು ಸಾವಿರ ಆರ್ಥಿಕ ನೆರವು ಸಿಗಲಿದೆ.
ಈ ಯೋಜನೆಯು ಇದೇ ನವೆಂಬರ್ 1ರಿಂದ ಪ್ರಾರಂಭವಾಗಲಿದ್ದು , ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದಲೇ ಫಲಾನುಭವಿಗಳಿಗೆ ಹಣ ದೊರಕಲಿದೆ.
ಈ ಯೋಜನೆಯು ತಾಯಿಯ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯವಾಗಲಿದೆ. ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 350 ಕೋಟಿ ಮೀಸಲಿಡಲಾಗಿದೆ.
ರಾಜ್ಯ ಸರ್ಕಾರದ ಮಾತೃಪೂರ್ಣ ಹಾಗೂ ಕೇಂದ್ರ ಸರ್ಕಾರದ ಮಾತೃ ವಂದನೆ ಕಾರ್ಯಕ್ರಮದಂತೆ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಈ ಯೋಜನೆ ಉತ್ತೇಜನಕಾರಿಯಾಗಿದೆ ಎಂಬುದು ಸರ್ಕಾರದ ವಿಶ್ವಾಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ