ಕನ್ನಡ ಮಾಧ್ಯಮ ತರಗತಿ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳು

 

ಬೆಂಗಳೂರು, ಜು.5- ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.
ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಆರಂಭಿಸಲು ಮನಸ್ಸು ಮಾಡಿರುವ ಸರ್ಕಾರ ಆರಂಭಿಕವಾಗಿ ಒಂದು ಸಾವಿರ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಇದಕ್ಕಾಗಿ 150 ಕೋಟಿ ರೂ.ಗಳನ್ನು ಮೀಸಲಿರಿಸಿದೆ.
ಎನ್‍ಸಿಸಿ ತರಬೇತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಉದ್ದೇಶದಿಂದ 5 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ.
ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಗೆ ಬಯೋಮೆಟ್ರಿಕ್ ಸಾಧನಾ ಅಳವಡಿಸಲು ನಿರ್ಧರಿಸಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಬಜೆಟ್‍ನಲ್ಲಿ 5 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಅಂಗನವಾಡಿ ಕೇಂದ್ರಗಳನ್ನು ಆಯ್ದ 4100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ ಆ ಪ್ರದೇಶವನ್ನು ಬಾಲಸ್ನೇಹಿ ಕೇಂದ್ರಗಳನ್ನಾಗಿ ಬಲವರ್ಧನೆಗೊಳಿಸಲು ಸರ್ಕಾರ ಮನಸ್ಸು ಮಾಡಿದೆ.
ಮುಂದಿನ ದಿನಗಳಲ್ಲಿ ಈ ಬಾಲಸ್ನೇಹಿ ಕೇಂದ್ರಗಳನ್ನೇ ಸರ್ಕಾರಿ ಶಾಲೆಗಳ ಎಲ್‍ಕೆಜಿ, ಯುಕೆಜಿ ತರಗತಿಗಳನ್ನಾಗಿ ಪರಿವರ್ತನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ