ಎಚ್.ಡಿ.ಕುಮಾರಸ್ವಾಮಿ – 2.18 ಲಕ್ಷ ಕೋಟಿ ಗಾತ್ರದ ಬಜೆಟ್ ಸಿದ್ದರಾಮಯ್ಯ – 2.09 ಲಕ್ಷ ಕೋಟಿ ಬಜೆಟ್

 

ಬೆಂಗಳೂರು, ಜು.5-ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ಇಂದು ವಿಧಾನಸಭೆಯಲ್ಲಿ 2.18 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದರು.
ಈ ಮೊದಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೂ ಮುನ್ನ ಫೆಬ್ರವರಿ 16 ರಂದು 2,09,181 ಕೋಟಿ ರೂ. ಮೌಲ್ಯದ ಬಜೆಟ್ ಮಂಡಿಸಿದ್ದರು.
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿನ ಎಲ್ಲಾ ಯೋಜನೆಗಳು ಮುಂದುವರೆಯುತ್ತವೆ ಎಂದು ಹೇಳಿರುವ ಮುಖ್ಯಮಂತ್ರಿ ಅವರು, 78 ಪುಟಗಳ ಚಿಕ್ಕ, ಚೊಕ್ಕ ಬಜೆಟ್‍ನ್ನು ಇಂದು ಮಂಡಿಸಿದ್ದಾರೆ. ಅದರಲ್ಲಿ ಬಹುತೇಕ ಕುಮಾರಸ್ವಾಮಿಯವರ ಆಲೋಚನಾ ಲಹರಿಗಳಿಗೆ ಅನುಗುಣವಾದ ಹೊಸ ಯೋಜನೆಗಳು ಅಡಕಗೊಂಡಿವೆ.
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಕುಮಾರಸ್ವಾಮಿ ಅವರ ಬಜೆಟ್‍ನ ಗಾತ್ರ 9,307 ಕೋಟಿ ರೂ. ಹೆಚ್ಚಾಗಿದೆ. ಒಟ್ಟು 2,13,734 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದ್ದು, ಅದರಲ್ಲಿ 1,66,396 ರಾಜಸ್ವ ಆದಾಯ, 47,134 ಸಾಲ ಹಾಗೂ 47,338 ಬಂಡವಾಳ ಜಮೆಗಳನ್ನು ಒಳಗೊಂಡಿದೆ.
ರಾಜಸ್ವದ ಪೈಕಿ 1,66,290 ಕೋಟಿ ವೆಚ್ಚ, ಬಂಡವಾಳದಲ್ಲಿ 41,063 ಕೋಟಿ , ಸಾಲ ಮರುಪಾವತಿಗೆ 11,136 ಕೋಟಿ ಸೇರಿ ಒಟ್ಟು 2,18,448 ಕೋಟಿ ರೂ. ವೆಚ್ಚದ ಬಜೆಟ್‍ನ್ನು ಮಂಡಿಸಿದ್ದಾರೆ.
ಈ ಮೂಲಕ ರಾಜಸ್ವದ ಹೆಚ್ಚುವರಿಯನ್ನು 106 ಕೋಟಿ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯನ್ನು 43,753 ಕೋಟಿ ಎಂದು ನಿರೀಕ್ಷಿಸಲಾಗಿದೆ. ವಿತ್ತೀಯ ಕೊರತೆ ರಾಜ್ಯದ ಆಂತರಿಕ ಉತ್ಪನ್ನದ ಶೇ.2.89ರಷ್ಟಿದೆ.
2018-19ನೇ ಕೊನೆಯಲ್ಲಿ ರಾಜ್ಯದ ಹೊಣೆಗಾರಿಕೆಗಳು 2,92,220 ಕೋಟಿ ಗಳಷ್ಟಾಗಲಿದ್ದು, ಒಟ್ಟು ಆಂತರಿಕ ಉತ್ಪನ್ನದ 20.75ರಷ್ಟಾಗಿರುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಒಡೆತನದ ವಿವಿಧ ನಿಗಮಗಳು, ಮಂಡಳಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲಗಳ ಮೇಲೆ 16,716 ಕೋಟಿ ರೂ. ಸಾಲ ಮಾಡುವ ಗುರಿ ಇದೆ.
ಸಾಲ ಮನ್ನಾದಿಂದ 34 ಸಾವಿರ ಕೋಟಿ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಿಂದ 10,700ಕೋಟಿ ಸೇರಿ ಒಟ್ಟು 40 ಸಾವಿರ ಕೋಟಿಗೂ ಹೆಚ್ಚಿನ ಆರ್ಥಿಕ ಹೊರೆ ರಾಜ್ಯದ ಬೊಕ್ಕಸದ ಮೇಲೆ ಬೀಳುತ್ತಿದೆ. ಇದನ್ನು ನಿಭಾಯಿಸುವುದು ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿರುವ ಕುಮಾರಸ್ವಾಮಿಯವರ ಮುಂದಿರುವ ದೊಡ್ಡ ಸವಾಲಾಗಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಕುಮಾರಸ್ವಾಮಿ ಬಜೆಟ್ ಮಂಡಿಸಲು ಮುಂದಾದಾಗ ಸಿದ್ದರಾಮಯ್ಯ ಅವರು ಅದನ್ನು ವಿರೋಧಿಸಿ ತಾವು ಈ ಮೊದಲು ಮಂಡಿಸಿದ ಬಜೆಟ್‍ನ್ನೇ ಮುಂದುವರೆಸಬೇಕು. ಕುಮಾರಸ್ವಾಮಿ ಬೇಕಿದ್ದರೆ ಪೂರಕ ಬಜೆಟ್ ಮಂಡಿಸಿ ಹೊಸ ಯೋಜನೆಗಳನ್ನು ಸೇರಿಸಲಿ ಎಂಬ ಹೇಳಿಕೆಗಳನ್ನು ನೀಡಿದ್ದರು.
ಅದು ವಿವಾದ ಸೃಷ್ಟಿಸಿ ಚರ್ಚೆಗೆ ಗ್ರಾಸವಾಗಿತ್ತು. ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಣಯಿಸಿದ ಪ್ರಯುಕ್ತ ಕುಮಾರಸ್ವಾಮಿ ಅವರು ಇಂದು ಹೊಸ ಬಜೆಟ್ ಮಂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ