ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರ ಅನಿವಾರ್ಯ- ಮುಖ್ಯಮಂತ್ರಿ ಎ ಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು,ಜು.5- ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರ ಕೇಂದ್ರ ಮತ್ತು ರಾಜ್ಯಕ್ಕೆ ಅನಿವಾರ್ಯ ಎಂಬುದನ್ನು ಮುಖ್ಯಮಂತ್ರಿಎ ಚ್.ಡಿ.ಕುಮಾರಸ್ವಾಮಿ ತಮ್ಮ ಬಜೆಟ್ ಭಾಷಣದಲ್ಲಿ ಒತ್ತಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಸೆಣಸಾಡಿದ ಎರಡು ರಾಜಕೀಯ ಪಕ್ಷಗಳು ಫಲಿತಾಂಶದ ನಂತರ ಮೈತ್ರಿ ಸಾಧಿಸಿದ್ದು ಪ್ರಜಾಪ್ರಭುತ್ವದ ಒಂದು ಸೊಬಗು ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು.
ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ರಾಷ್ಟ್ರ ಮತ್ತು ರಾಜ್ಯದಲ್ಲಿ ಮೈತ್ರಿ ಸರ್ಕಾರಗಳು ಅನಿವಾರ್ಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಾವು ರಾಜ್ಯದ ಮೈತ್ರಿ ಸರ್ಕಾರದ ಅನಿವಾರ್ಯತೆ ಮತ್ತು ಅಗತ್ಯದ ವಾಸ್ತವತೆಯನ್ನು ಒಪ್ಪಿಕೊಂಡಿದ್ದೇವೆ ಎಂದರು.
ಸಮನ್ವಯ ಸಮಿತಿಯ ಆಶಯದಂತೆ ಎರಡೂ ಪಕ್ಷಗಳ ಪ್ರಣಾಳಿಕೆಗಳ ಪ್ರಮುಖ ಅಂಶಗಳನ್ನುಆಧರಿಸಿ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದ್ದೇವೆ. ಸರ್ಕಾರ ಸುಲಲಿತವಾಗಿ ಮುನ್ನೆಡೆಯಲು ನಾವೇ ರೂಪಿಸಿಕೊಂಡಿರುವ ಮೈತ್ರಿ ಧರ್ಮಕ್ಕೆ ಅನುಗುಣವಾಗಿ ಮುನ್ನಡೆದು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು.
ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಜನರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಇದನ್ನು ನಾವು ಹುಸಿಗೊಳಿಸದೆ ಆಶಯಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ರೈತರ ಸಾಲ ಮನ್ನಾ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಸಂಗ್ರಹಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ.
ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದೇವೆ. ಸರ್ಕಾರದ ದುಂದುವೆಚ್ಚಕ್ಕೆ ಕಡಿವಾಣ ಹಾಕಲ ಸ್ವತಃ ನಾನೇ ಮಿತವ್ಯಯದ ನಡೆಯನ್ನು ಪ್ರಾರಂಭಿಸಿದ್ದೇನೆ. ನನ್ನಂತೆ ನನ್ನ ಸಹೋದ್ಯೋಗಿ ಸಚಿವರುಗಳು ಸಹ ಮಿತವ್ಯಯ ವಿಷಯದಲ್ಲಿ ನನ್ನ ಮಾದರಿಯನ್ನು ಅನುಸರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ