ಜನಸಾಮಾನ್ಯರ ಮೇಲೆ ದರ ಹೊರೆ ಇದೊಂದು ಅಣ್ಣತಮ್ಮಂದಿರ ಬಜೆಟ್-ಬಿ.ಎಸ್.ಯಡಿಯೂರಪ್ಪ ವ್ಯಂಗ್ಯ

 

ಬೆಂಗಳೂರು,ಜು.5- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‍ನಲ್ಲಿ ಪೆಟ್ರೋಲ್-ಡೀಸೆಲ್, ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಿದ್ದು, ಇದೊಂದು ಅಣ್ಣತಮ್ಮಂದಿರ ಬಜೆಟ್ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಕೇವಲ ಹಾಸನ ಮತ್ತು ರಾಮನಗರ ಜಿಲ್ಲೆಗಳಿಗೆ ಮಾತ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಧ್ಯಕರ್ನಾಟಕ ಸೇರಿದಂತೆ ಮತ್ತಿತರ ಭಾಗಗಳನ್ನು ಕಡೆಗಣಿಸಿ ತಮ್ಮ ವೋಟ್ ಬ್ಯಾಂಕ್ ಗಟ್ಟಿಗೊಳಿಸುವ ಬಜೆಟ್‍ನ್ನು ಕುಮಾರಸ್ವಾಮಿ ಮಂಡಿಸಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಬಜೆಟ್ ಆಗದೆ ಅಣ್ಣತಮ್ಮಂದಿರ ಬಜೆಟ್ ಎಂದು ಆರೋಪಿಸಿದರು.
ಬಜೆಟ್ ಮಂಡನೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ , ಹೊಸ ಸರ್ಕಾರದ ಭರವಸೆಯ ಬಗ್ಗೆ ರಾಜ್ಯದ ಜನತೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಜೆಟ್ ಮಂಡನೆ ಮಾಡಲಾಗಿದೆ. ಇದೊಂದು ಜನವಿರೋಧಿ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಮರೆತು ಹಾಸನ ಮತ್ತು ರಾಮನಗರಕ್ಕೆ ಬಜೆಟ್ ಮಂಡಿಸಿದ್ದೀರಿ. ಡೀಸೆಲ್, ಪೆಟ್ರೋಲ್ ಹಾಗೂ ವಿದ್ಯುತ್ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ತೆರಿಗೆ ಭಾರವನ್ನು ಹೊರಿಸಿದ್ದೀರಿ.ಇದಕ್ಕಾಗಿಯೇ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಈಗ ಕೇವಲ 34000 ಕೋಟಿ ಸಾಲ ಮನ್ನಾ ಮಾಡಿದ್ದೀರಿ.ಇದಕ್ಕೆ ಹೇಗೆ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ನಿಮ್ಮ ಬಳಿ ಉತ್ತರವಿಲ್ಲ. ಸಂಪೂರ್ಣ ಸಾಲಮನ್ನಾ ಯೋಜನೆ ಎಲ್ಲಿಗೆ ಬಂತೆಂದು ಪ್ರಶ್ನಿಸಿದರು.
ಇನ್ನು ನಾಳೆಯಿಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ. ಚರ್ಚೆ ವೇಳೆ ಸರ್ಕಾರ ಎಲ್ಲೆಲ್ಲಿ ಎಡವಿದೆ ಎಂಬುದನ್ನು ಸದನದಲ್ಲಿ ಸಂಪೂರ್ಣವಾಗಿ ಅಂಕಿಸಂಖ್ಯೆಗಳ ಸಮೇತ ಇಡುತ್ತೇವೆ. ಜನತೆಗೆ ಸುಳ್ಳು ಭರವಸೆಗಳನ್ನು ನೀಡಿರುವ ಕುಮಾರಸ್ವಾಮಿಗೆ ನಾಚಿಕೆಯಾಗುವುದಿಲ್ಲವೇ ಎಂದು ಹರಿಹಾಯ್ದರು.
ಜೆಡಿಎಸ್ ಗೆದ್ದಿರುವ ಜಿಲ್ಲೆಗಳಿಗೆ ಹೆಚ್ಚಿನ ಯೋಜನೆಗಳನ್ನು ಪ್ರಕಟಿಸಲಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕಕ್ಕೆ ಒಂದೇ ಒಂದೂ ಕಾರ್ಯಕ್ರಮವನ್ನು ನೀಡಿಲ್ಲ.ಸಮ್ಮಿಶ್ರ ಸರ್ಕಾರದ ಈ ಸುಳ್ಳು ಬಜೆಟ್‍ನ್ನು ಯಾರೊಬ್ಬರು ನಂಬಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ