ಬೆಂಗಳೂರು, ಜು.5-ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಸುವ ಪ್ರಕ್ರಿಯೆ ದೀರ್ಘ ಸಮಯ ಹಿಡಿಯುತ್ತಿದ್ದು, ಇದನ್ನು ಕಡಿಮೆ ಮಾಡಲು ಗ್ರಾಮೀಣ ಭಾಗದಲ್ಲಿ ಸುಮಾರು 100-200 ಎಕರೆ ಒಣ, ಬಂಜರು ಭೂಮಿಯನ್ನು ಗುರುತಿಸಿ ಅಧಿಸೂಚನೆ ಹೊರಡಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಮಂಡಿಸಿದ ಬಜೆಟ್‍ನಲ್ಲಿ ಕೈಗಾರಿಕಾಭಿವೃದ್ಧಿ ಬಗ್ಗೆ ಹೆಚ್ಚು ಆಸ್ಥೆ ತೋರಿಸಿರುವ ಅವರು, ಗ್ರಾಮೀಣ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆಗಳು ಮತ್ತು ಉದ್ಯೋಗ ಸೃಷ್ಟಿಯಾಗಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ಸರಳ ಗೊಳಿಸುವುದಾಗಿ ಹೇಳಿದ್ದಾರೆ.
ಕೆಐಎಡಿಬಿ ಮತ್ತು ಕೆಎಸ್‍ಐಐಡಿಸಿಯಿಂದ ನಿವೇಶನ, ಶೆಡ್‍ಗಳನ್ನು ತಾತ್ಕಾಲಿಕ ದರದಲ್ಲಿ ಹಂಚಿಕೆ ಮಾಡಿ ಅನಿಶ್ಚಿತತೆಯನ್ನು ನಿರ್ಮಿಸಲಾಗುತ್ತಿತ್ತು. ತಾತ್ಕಾಲಿಕ ದರ ನಿಗದಿ ಮಾಡುವ ಮೂಲಕ ನಿವೇಶನದ ಸಂಪೂರ್ಣ ಹಕ್ಕುಬಾಧ್ಯತೆಯನ್ನು ಕೈಗಾರಿಕಾ ಮಾಲೀಕರಿಗೆ ನೀಡದೆ ಹತ್ತು ವರ್ಷಗಳ ಭೋಗ್ಯದ ಅವಧಿಯ ಮೂಲಕ ಭೂಮಿ ಹಂಚಿಕೆ ಮಾಡಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಬದಲಿಸಿ ತಾತ್ಕಾಲಿಕ ದರದ ಬದಲಿಗೆ ಅಂತಿಮ ಹಂಚಿಕೆ ದರವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ಈ ವರೆಗೂ ಕೈಗಾರಿಕೆಗಳಿಗೆ ಭೋಗ್ಯ ಆಧಾರದ ಮೇಲೆ ನೀಡುತ್ತಿದ್ದ ಪದ್ಧತಿಯನ್ನು ರದ್ದುಪಡಿಸಿ ನೇರವಾಗಿ ಮಾಲೀಕತ್ವ ನೀಡುವ ವ್ಯವಸ್ಥೆ ಜಾರಿ ಮಾಡುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.
ಕೈಗಾರಿಕಾ ಪ್ರದೇಶ ಮತ್ತು ವಸಾಹತು ನಿರ್ವಹಣೆ ಮತ್ತು ಉನ್ನತೀಕರಣಗೊಳಿಸಲು ಸುಸ್ಥಿರವಾದ ಸಾಂಸ್ಥಿಯ ನಿರ್ವಹಣಾ ವ್ಯವಸ್ಥೆ ಅಗತ್ಯವಿದ್ದು, ಈಗಾಗಲೇ ಅಭಿವೃದ್ಧಿಪಡಿಸಿರುವ ಹಳೆಯ ಕೈಗಾರಿಕಾ ಪ್ರದೇಶ ಮತ್ತು ವಸಾಹತುಗಳನ್ನು ಕೈಗಾರಿಕಾ ಪಟ್ಟಣ ಪ್ರದೇಶಗಳನ್ನಾಗಿ ಘೋಷಿಸಲಾಗುವುದು.
ಬಂಡವಾಳ ಆಕರ್ಷಿಸಲು ಸರ್ಕಾರದೊಂದಿಗಿನ ವ್ಯವಹಾರಗಳನ್ನು ಸರಳೀಕರಣಗೊಳಿಸುವ ಸಲುವಾಗಿ ಕಾರ್ಮಿಕ, ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಪರಿಸರ ಮತ್ತು ಇತರ ಇಲಾಖೆಗಳು ನೀಡುತ್ತಿರುವ ಸೇವೆಗಳನ್ನು ಮರುವಿನ್ಯಾಸಗೊಳಿಸಿ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು.
ಕಾರ್ಮಿಕ, ಕಾರ್ಖಾನೆಗಳು, ಪರಿಸರ ತೆರಿಗೆ ಜಾರಿ ಇಲಾಖೆಗಳು ವಿವಿಧ ಕಾಯ್ದೆಗಳ ಪಾಲನೆಗಾಗಿ ಕಾಲಕಾಲಕ್ಕೆ ತಪಾಸಣೆಗಳನ್ನು ನಡೆಸುತ್ತಿರುತ್ತವೆ. ಇದನ್ನು ಸುಗಮಗೊಳಿಸಿ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಕೈಗಾರಿಕಾ ಸಂಸ್ಥೆಗಳ ಸಹಯೋಗದೊಂದಿಗೆ ಕೇಂದ್ರೀಕೃತ ತಪಾಸಣಾ ವ್ಯವಸ್ಥೆಯನ್ನು ರೂಪಿಸಲಾಗುವುದು.
ಗ್ರಾಮೀಣ ಭಾಗದಲ್ಲಿ ತೆಂಗಿನ ನಾರಿನ ವಲಯಗಳಲ್ಲಿ ಕೆಲಸ ನಿರ್ವಹಿಸುವ ಕುಶಲಕರ್ಮಿಗಳು ಕಡಿಮೆ ವೇತನ ಪಡೆಯುತ್ತಿದ್ದಾರೆ. ಅವರಿಗೆ ವಾರ್ಷಿಕ 10 ಸಾವಿರ ಪೆÇ್ರೀ ಧನ ನೀಡಿ, ತೆಂಗು, ನಾರು ಉದ್ಯಮ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಜೊತೆಗೆ ತೆಂಗು-ನಾರು ಉತ್ಪಾದನೆಗೆ ಶೇ.10ರ ದರದಲ್ಲಿ ಮಾರುಕಟ್ಟೆ ಅಭಿವೃದ್ಧಿ ಸಹಾಯ ಧನ ನೀಡಲಾಗುವುದು.
ಕಲ್ಲು ಗಣಿಗಳಲ್ಲಿ ಕೆಲಸ ಮಾಡುವವರಿಗೆ ಸುರಕ್ಷತೆಯ ವಿಧಾನಗಳನ್ನು ಕಲಿಸಿಕೊಡಲು ಗಣಿಗಾರಿಕೆ ಮತ್ತು ಗಣಿ ಸುರಕ್ಷತಾ ವಿಧಾನಗಳ ತರಬೇತಿಯನ್ನು ಆಯೋಜಿಸಿ ಗುತ್ತಿಗೆದಾರರು, ಕೆಲಸಗಾರರಿಗೆ ಪ್ರಮಾಣಪತ್ರ ನೀಡಲಾಗುವುದು. ಹಾಲಿ ಕಲ್ಲು ಗಣಿಗಳು ಹಾಗೂ ಹೊಸ ಪರವಾನಗಿ ಪಡೆಯುವವರು ಪ್ರಮಾಣಪತ್ರ ಪಡೆಯುವುದು ಕಡ್ಡಾಯ ಎಂದಿದ್ದಾರೆ.
ಕಲ್ಲು ಗಣಿ, ಕ್ರಷರ್‍ಗಳ ಮಾಹಿತಿ ನೀಡುವ ಮೊಬೈಲ್ ಆ್ಯಪ್ ರೂಪಿಸಿ ಸಾರ್ವಜನಿಕರಿಗೆ ಸಗಟು ದರದಲ್ಲಿ ಕಲ್ಲು, ಜಲ್ಲಿ ಹಾಗೂ ಕಲ್ಲಿನ ಉತ್ಪನ್ನಗಳು ದೊರೆಯುವಂತೆ ಮಾಡಲಾಗುವುದು.
ಗೃಹ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗಾಗಿ ಮರಳು, ಜಲ್ಲಿ ಒದಗಿಸಲು ದಾಸ್ತಾನು ಕೇಂದ್ರಗಳನ್ನು ಆರಂಭಿಸಲಾಗುವುದು. ಹೊಸ ಜವಳಿ ನೀತಿ ರೂಪಿಸಿ ಸಿದ್ಧ ಉಡುಪು ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲಾಗುವುದು.
ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆ ಮೂಲಕ ಅತ್ಯಾಧುನಿಕ ಕೈಮಗ್ಗ ಸ್ಥಾಪಿಸಿ ನೇಕಾರರಿಗೆ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದ ಪರಿಚಯ ಮಾಡಿಸಲಾಗುವುದು.