ಭೂಪಾಲ್ : ಮಧ್ಯಪ್ರದೇಶದ ರಾಜ್ಯದ ಭೂಪಾಲ್ ನಲ್ಲಿ ಮದುವೆ ಆಯೋಜಕ ಹಮೀದ್ ಖಾನ್ ಮಧ್ಯಮ ವರ್ಗದ ನವ ದಂಪತಿಗಾಗಿ ದಿಬ್ಬಣಕ್ಕಾಗಿ ವಿನ್ಯಾಸಗೊಳಿಸಿರುವ ರಾಯಲ್ ವೆಡ್ಡಿಂಗ್ ಕಾರು ಆಕರ್ಷಣೇಯ ಕೇಂದ್ರಬಿಂದುವಾಗಿದೆ.ಮಧ್ಯಮ ವರ್ಗದವರ ಯುವ ದಂಪತಿಯನ್ನು ಕರೆದೊಯ್ಯಲು ಹಮೀದ್ ಖಾನ್ ತನ್ನ ರೊಲ್ಸ್ ರಾಯ್ಸ್ ಕಾರನ್ನು ವಿನೂತನ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ರಾಯಲ್ ವೆಡ್ಡಿಂಗ್ ಕಾರು ಎಂದು ಹೆಸರು ಇಟ್ಟಿದ್ದಾನೆ.ವಿವಾಹ ಸಂದರ್ಭದಲ್ಲಿ ಮಧ್ಯಮ ವರ್ಗದವರಲ್ಲಿಯೂ ಶ್ರೀಮಂತ್ರಿಕೆಯ ಅನುಭವ ಮೂಡಿಸುವ ನಿಟ್ಟಿನಲ್ಲಿ ಈ ಕಾರು ವಿನ್ಯಾಸಗೊಳಿಸಿದ್ದು, ಕಾರು ಬಳಕೆಯ ದರದ ಬಗ್ಗೆ ಈವರೆಗೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ. ದುಬೈನಲ್ಲಿ ಇದೇ ಹೋಲಿಕೆಯ ಕಾರುಗಳನ್ನು ನೋಡಿದ್ದ ಖಾನ್, ಈ ಕಾರು ವಿನ್ಯಾಸಗೊಳಿಸಲು ತೀರ್ಮಾನಿಸಿದ್ದು, ಕಾರು ಕಮ್ ಚಾರಿಯೆಟ್ ನಿರ್ಮಾಣ ಮಾಡಲು ಖಾನ್ 11 ತಿಂಗಳು ತೆಗೆದುಕೊಂಡಿದ್ದಾನೆ. ಆರು ಚಕ್ರದ ಈ ಕಾರಿನಲ್ಲಿ ಎಲ್ ಇಡಿ ಬೆಳಕಿನೊಂದಿಗೆ ಹವಾನಿಯಂತ್ರಿತ ವ್ಯವಸ್ಥೆಯಿದೆ. ಒಳಾಂಗಣದಲ್ಲಿ ಮರದಿಂದ ಆಲಂಕರಿಸಲಾಗಿದೆ. ಇದಕ್ಕಾಗಿ ಸುಮಾರು 15 ಲಕ್ಷ ವೆಚ್ಚ ಮಾಡಿರುವುದಾಗಿ ಖಾನ್ ತಿಳಿಸಿದ್ದಾನೆ.